Dailyhunt Logo
  • Light mode
    Follow system
    Dark mode
    • Play Story
    • App Story
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಪೊಲೀಸ್ ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಬಿರ

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಪೊಲೀಸ್ ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಬಿರ

ಕೋಲಾರ, 12 ಅಕ್ಟೋಬರ್ (ಹಿ.ಸ) : ಬೆಂಗಳೂರಿನ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ವಿಮಾನ ನಿಲ್ದಾಣ ರಸ್ತೆಯ ಕ್ಯಾಂಪಸ್ನ 'ಉನ್ನತ ಭಾರತ ಅಭಿಯಾನ' ಘಟಕ ಸಮುದಾಯದಲ್ಲಿ ಹಲವು ಕರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇದರ ಭಾಗವಾಗಿ ಬೆಂಗಳೂರು ಉತ್ತರ ತಾಲ್ಲೂಕು ವ್ಯಾಪ್ತಿಯ ಬಾಗಲೂರು ಪೊಲೀಸ್ ಠಾಣೆಯ ಮತ್ತು ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗೆ ವಿಶ್ವವಿದ್ಯಾಲಯದ 'ಉನ್ನತ ಭಾರತ ಅಭಿಯಾನ' ಘಟಕ ಹಾಗೂ ಮುತ್ತೂಟ್ ಸೇವಾಶ್ರಯ ರಕ್ತಪರೀಕ್ಷಾ ಕೇಂದ್ರದ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರದಲ್ಲಿ ನುರಿತ ಪ್ರಯೋಗಾಲಯ ತಜ್ಞರಿಂದ ರಕ್ತದೊತ್ತಡ, ಮಧುಮೇಹ, ಕೊಬ್ಬು, ಹೆಪಟೈಟಿಸ್-ಬಿ ಕಾರ್ಡ್, ಕ್ರಿಯೋಟಿನೈನ್, ತೂಕ ಮತ್ತು ಸಾಮಾನ್ಯ ಆರೋಗ್ಯ ಸಮಸ್ಯೆಗಳ ಕುರಿತ ರಕ್ತಪರೀಕ್ಷೆ ಮಾಡುವ ಮೂಲಕ ಉಚಿತ ತಪಾಸಣೆ ನಡೆಸಲಾಯಿತು.

ರಕ್ತಪರೀಕ್ಷೆಗೆ ಒಳಪಡುವವರು ಖಾಲಿ ಹೊಟೆಯಲ್ಲಿ ಬಂದು ಪರೀಕ್ಷಿಸಿಕೊಳ್ಳುವಂತೆ ಸೂಚಿಸಿ ವರದಿಯನ್ನು ಸ್ಥಳದಲ್ಲೇ ನೀಡಲಾಯಿತು. ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ತಡೆಗಳ ಕಾರ್ಯದೊತ್ತಡದಲ್ಲಿ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸದಿರುವುದರ ಪರಿಣಾಮವಾಗಿ ಬಹಳಷ್ಟು ಪೊಲೀಸ್ ಸಿಬ್ಬಂದಿ ಅತಿಯಾದ ರಕ್ತದೊತ್ತಡದಂತಹ ವಿವಿಧ ಸಮಸ್ಯೆಗಳಿಗೆ ತುತ್ತಾಗುತ್ತಿದ್ದು ಅವರ ಹಿತದೃಷ್ಟಿಯಿಂದ ತಮ್ಮ ಬಳಿಗೇ ಈ ಸೇವೆಯನ್ನು ಕೊಂಡೊಯ್ಯುವ ಸಲುವಾಗಿ ಕ್ರಿಸ್ತುಜಯಂತಿ ವಿಶ್ವವಿದ್ಯಾಲಯ ಈ ಮಹೋನ್ನತ ಕಾರ್ಯವನ್ನು ಹಮ್ಮಿಕೊಂಡಿತ್ತು.

ಸುಮಾರು ೧೫೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತವರ ಕುಟುಂಬಸ್ಥರು ಇದರ ಪ್ರಯೋಜನವನ್ನು ಪಡೆದಿದ್ದಾರೆ. ಈ ಉಪಯುಕ್ತ ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಶಿಬಿರಾಧಿಕಾರಿಯಾದ ಪ್ರೊ.ಚಂದ್ರಶೇಖರ್ ಎನ್., ಸಂಯೋಜಕರಾದ ಪ್ರೊ. ಮಂಜುನಾಥ್ ಎಸ್. ಹಾಗೂ ಡಾ. ವಿನೋದ್ ಬಾಬೂರಾವ್ ಮೇಘಶ್ಯಾಮ್ ಮತ್ತು ಇಪ್ಪತ್ತು ಮಂದಿ ವಿದ್ಯಾರ್ಥಿ ಸ್ವಯಂಸೇವಕರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada