ಸುದ್ದಿ
ಮಾವು ಮಾರುಕಟ್ಟೆ ಸುಸ್ಥಿರತೆಗೆ ನೇರ ಮಾರುಕಟ್ಟೆ ಅಗತ್ಯ: ಸಚಿವ ಡಾ.ಕೆ. ಸುಧಾಕರ್
ಇಂದು ಲಾಲ್ಬಾಗ್ನಲ್ಲಿ ಮಾವು ನಿಗಮದ ನೂತನ ಅಧ್ಯಕ್ಷರ ಅಧಿಕಾರ ಪದಗ್ರಹಣ ಹಾಗೂ ಮಾವು ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಸಚಿವ ಡಾ.ಕೆ. ಸುಧಾಕರ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಸಚಿವರು ಮಾವು ತಾಂತ್ರಿಕ ಮಾಹಿತಿ ಒಳಗೊಂಡ ಕರಪತ್ರ ಹಾಗೂ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು. ಕರಪತ್ರ ಹಾಗೂ ಭಿತ್ತಿ ಪತ್ರ ನವೆಂಬರ್/ಡಿಸೆಂಬರ್ 2020ರ ಮಾಹೆಯಲ್ಲಿ ಹಾಗೂ ನಂತರ ಹೂ ಬಿಡುವ ಮತ್ತು ಕಾಯಿ ಕಚ್ಚುವ ಅವಧಿಯಲ್ಲಿ ಕೈಗೊಳ್ಳಬೇಕಾದ ಸಸ್ಯ ಸಂರಕ್ಷಣಾ ಕ್ರಮಗಳ ಮಾಹಿತಿ ಒಳಗೊಂಡಿದೆ.
ಮಾವು ಮಕ್ಕಳಿಂದ ಹಿಡಿದು ದೊಡ್ಡವರಿಗೂ ಪ್ರಿಯವಾದ ಹಣ್ಣಾಗಿದೆ. ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಮಾವು ಮಾರುಕಟ್ಟೆ ಸುಸ್ಥಿರತೆಗೆ ಅಗತ್ಯವಾದ ನೇರ ಮಾರುಕಟ್ಟೆ, ಹೊರರಾಜ್ಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳ ಸಂಪರ್ಕ ಕಲ್ಪಿಸಬೇಕು. ಮಾವಿಗೆ ರೋಗ ಬಂದಾಗ ಮತ್ತು ನೈಸರ್ಗಿಕವಾಗಿ ಬೆಳೆಯಲು ರೈತರು ಕೃಷಿ ವಿಶ್ವವಿದ್ಯಾನಿಲಯದ ಸಹಾಯ ಪಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾವು ನಿಗಮದ ನೂತನ ಅಧ್ಯಕ್ಷರಾಗಿ ಕೆ.ವಿ.ನಾಗರಾಜು ಅಧಿಕಾರ ಸ್ವೀಕರಿಸಿದರು. ನಂತರ ಮಾತನಾಡಿದ ಅವರು ರಾಜ್ಯದಲ್ಲಿ ಮಾವು ಬೇಸಾಯ ಮತ್ತು ಉತ್ಪಾದನೆ ಕುರಿತು ತಾಂತ್ರಿಕ ಮಾಹಿತಿಯನ್ನು ಮಾವು ಬೆಳೆಗಾರರಿಗೆ ಒದಗಿಸಬೇಕು. ಹೋಬಳಿಮಟ್ಟ/ಜಿಲ್ಲಾ ಮಟ್ಟ/ರಾಜ್ಯ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಾವು ಬೆಳೆಗಾರರಿಗೆ ವಿವಿಧ ಜಿಲ್ಲೆ, ಮತ್ತು ಹೊರ ರಾಜ್ಯಗಳಿಗೆ ಅಧ್ಯಯನ ಪ್ರವಾಸ ಏರ್ಪಡಿಸಬೇದು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜಿ.ನಾಗರಾಜು ಪ್ರಸ್ತಾವಿಕ ಭಾಷಣ ಮಾಡಿದರು. ನಿವೃತ್ತ ತೋಟಗಾರಿಕೆ ಅಪರ ನಿರ್ದೇಶಕರಾದ ಎಸ್.ವಿ. ಹಿತ್ತಲಮನಿ ಹಾಗೂ ಗಣ್ಯರು ಉಪಸ್ಥಿತರಿದ್ದರು.