Dailyhunt
ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಆರೋಪ ; ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ದೂರು

ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಆರೋಪ ; ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ದೂರು

ಬಾಗಲಕೋಟೆ, 07 ಮೇ (ಹಿ.ಸ.) :

ಆಂಕರ್ : ಅಕ್ರಮ ಸಾರಾಯಿ ಮಾರಾಟದ ಮಾಹಿತಿ ಮೇರೆಗೆ ಮನೆಗೆ ತೆರಳಿದ್ದ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಮಹಿಳೆಯೊಬ್ಬರು ಹಲ್ಲೆ ಹಾಗೂ ಜಾತಿ ನಿಂದನೆ ಆರೋಪ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಸಂಬಂಧ ಜಮಖಂಡಿ ಅಬಕಾರಿ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರು ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ತನಿಖೆ ಹಂತದಲ್ಲಿದೆ.

ನಾವಲಗಿ ಗ್ರಾಮದ ಚಂದ್ರವ್ವ ಬಸಪ್ಪ ಕದಂ ಅವರ ಮನೆಯಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು ಎಂದು ತಿಳಿದು ಬಂದಿದೆ. ಆದರೆ, ದಾಳಿ ವೇಳೆ ಅಧಿಕಾರಿಗಳು ತಮ್ಮ ಮನೆಗೆ ಬಲವಂತವಾಗಿ ನುಗ್ಗಿ ತಮ್ಮ ಮೇಲೆ ಹಲ್ಲೆ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜಾತಿ ಕುರಿತು ಅವಮಾನ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಹಲ್ಲೆಗೊಳಗಾದೆನೆಂದು ಆರೋಪಿಸಿರುವ ಚಂದ್ರವ್ವ ಬಸಪ್ಪ ಕದಂ ಅವರು ಬನಹಟ್ಟಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ. ಘಟನೆಯ ಕುರಿತು ಸ್ಥಳೀಯರಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸತ್ಯಾಸತ್ಯತೆ ಹೊರ ಬರಬೇಕಿದೆ.

ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅಧಿಕಾರಿಗಳು ಕಾನೂನು ಜಾರಿ ಹೆಸರಿನಲ್ಲಿ ಮಿತಿಮೀರಿದ ವರ್ತನೆ ತೋರಿದ್ದಾರೆಯೇ ಎಂಬ ಪ್ರಶ್ನೆ ಎದ್ದಿರುವಂತೆಯೇ, ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವ ವೇಳೆ ಇಲಾಖಾ ಸಿಬ್ಬಂದಿಗೆ ಎದುರಾಗುವ ಸವಾಲುಗಳ ಬಗ್ಗೆ ಸಹ ಚರ್ಚೆ ನಡೆಯುತ್ತಿದೆ.

ಈ ಪ್ರಕರಣದಲ್ಲಿ ಆರೋಪ ಕೇಳಿಬಂದಿರುವ ಅಬಕಾರಿ ಇಲಾಖೆ ಸಿಬ್ಬಂದಿ ವಿರುದ್ಧ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರು ಯಾರು ಎಂಬುದನ್ನು ಕಾನೂನು ಪ್ರಕಾರ ಸ್ಪಷ್ಟಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada