ವಿಜಯಪುರ, 07 ಜುಲೈ (ಹಿ.ಸ.)
ಆಯಂಕರ್ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಐತಿಹಾಸಿಕ ಹಾಗೂ ಭಕ್ತರ ಆರಾಧ್ಯ ಕ್ಷೇತ್ರವಾಗಿರುವ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಭಾರೀ ಕಳ್ಳತನ ಭಕ್ತರಲ್ಲಿ ತೀವ್ರ ಆಘಾತ ಉಂಟುಮಾಡಿದೆ.
ದೇವಸ್ಥಾನದ ಗರ್ಭಗುಡಿಯ ಬೀಗ ಮುರಿದು ಸುಮಾರು 32 ಕೆಜಿ ತೂಕದ ಬೆಳ್ಳಿಯಿಂದ ನಿರ್ಮಿಸಲಾದ ಬಸವೇಶ್ವರರ ವಿಗ್ರಹವನ್ನು ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ದೇವಸ್ಥಾನದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಕಳೆದ ಜೂನ್ 27ರಿಂದಲೇ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದೇ ಪರಿಸ್ಥಿತಿಯನ್ನು ದುರಪಯೋಗಪಡಿಸಿಕೊಂಡ ಕಳ್ಳರು ಪೂರ್ವಯೋಜಿತವಾಗಿ ದೇವಸ್ಥಾನ ಪ್ರವೇಶಿಸಿ, ಗರ್ಭಗುಡಿಯ ಬೀಗ ಮುರಿದು ಅಮೂಲ್ಯ ಬೆಳ್ಳಿಯ ವಿಗ್ರಹವನ್ನು ಕದ್ದೊಯ್ದಿದ್ದಾರೆ. ಕಳ್ಳರು ಅತ್ಯಂತ ನಿಖರವಾಗಿ ಯೋಜನೆ ರೂಪಿಸಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಕಳುವಾಗಿರುವ ಈ ಭವ್ಯ ಬಸವೇಶ್ವರರ ವಿಗ್ರಹಕ್ಕೆ ವಿಶೇಷ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವವಿದೆ. 2016-17ರಲ್ಲಿ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಹರಕೆಯ ರೂಪದಲ್ಲಿ ನೀಡಿದ ಬೆಳ್ಳಿಯಿಂದ ಈ ಮೂರ್ತಿಯನ್ನು ತಯಾರಿಸಲಾಗಿತ್ತು. ಬಳಿಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಅದ್ಧೂರಿಯಾಗಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಕಾರಣದಿಂದ ಈ ಮೂರ್ತಿಗೆ ಭಕ್ತರಲ್ಲಿ ಅಪಾರ ಭಕ್ತಿ ಹಾಗೂ ಭಾವನಾತ್ಮಕ ನಂಟು ಬೆಳೆದಿತ್ತು.
ಕಳುವಿನ ಮಾಹಿತಿ ತಿಳಿಯುತ್ತಿದ್ದಂತೆಯೇ ಡಿವೈಎಸ್ಪಿ ಚಂದ್ರಕಾಂತ್ ನಂದರೆಡ್ಡಿ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಸ್ಥಳದಲ್ಲಿದ್ದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ. ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಸಿ.ಎಸ್. ನಾಡಗೌಡ ಹಾಗೂ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ದೇವಸ್ಥಾನದ ಪವಿತ್ರತೆಯ ಮೇಲೆ ನಡೆದಿರುವ ಈ ಕೃತ್ಯವನ್ನು ಖಂಡಿಸಿದ್ದು, ಕಳ್ಳರನ್ನು ಶೀಘ್ರ ಬಂಧಿಸಿ ವಿಗ್ರಹವನ್ನು ಸುರಕ್ಷಿತವಾಗಿ ಮರಳಿ ತರುವಂತೆ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.
ಗರ್ಭಗುಡಿಯಲ್ಲಿ ಆರಾಧ್ಯ ಬಸವೇಶ್ವರರ ವಿಗ್ರಹ ಕಾಣೆಯಾಗಿರುವ ದೃಶ್ಯ ಕಂಡು ಅನೇಕ ಭಕ್ತರು ಭಾವುಕರಾಗಿ ಕಣ್ಣೀರು ಹಾಕಿದರು. ಇದು ಕೇವಲ ಬೆಳ್ಳಿಯ ಮೂರ್ತಿ ಅಲ್ಲ, ನಮ್ಮ ನಂಬಿಕೆ ಮತ್ತು ಭಕ್ತಿಯ ಸಂಕೇತ ಎಂದು ಭಕ್ತರು ನೋವು ವ್ಯಕ್ತಪಡಿಸಿದ್ದಾರೆ.
ಈ ಘಟನೆ ವಿಜಯಪುರ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ದೇವಸ್ಥಾನಗಳ ಭದ್ರತೆ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಉದ್ಭವಿಸಿವೆ. ಸಿಸಿಟಿವಿ ವ್ಯವಸ್ಥೆ ದೀರ್ಘಕಾಲದಿಂದ ಕಾರ್ಯನಿರ್ವಹಿಸದಿರುವುದು ಹಾಗೂ ದೇವಸ್ಥಾನದ ಭದ್ರತಾ ಲೋಪದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ
---------------
ಹಿಂದೂಸ್ತಾನ್ ಸಮಾಚಾರ್ / jyothi deshpande

