ಬಾಗಲಕೋಟೆ, 07 ಜುಲೈ (ಹಿ.ಸ.)
ಆಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಕುಡಿಯುವ ನೀರಿನ ಪೈಪ್‌ಗಳು ಒಡೆದು ಹಾಗೂ ವಾಲ್ವ್‌ಗಳು ಸಡಿಲಗೊಂಡ ಪರಿಣಾಮ ಸಾವಿರಾರು ಲೀಟರ್ ಶುದ್ಧ ನೀರು ರಸ್ತೆಗಳಲ್ಲಿ ಹರಿದು ವ್ಯರ್ಥವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಕೆರೆಯ ಸಮೀಪದ ಪಾದಗಟ್ಟಿಯಿಂದ ಸಾರ್ಡ್ ಸಂಸ್ಥೆಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಮೂರು ಕಡೆ ಕುಡಿಯುವ ನೀರಿನ ಪೈಪ್‌ಗಳು ಒಡೆದು ನಿರಂತರವಾಗಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ರಸ್ತೆಯಲ್ಲಿ ಕೆಸರು ನಿರ್ಮಾಣವಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ.
ಅಂಬೇಡ್ಕರ್ ವೃತ್ತದ ಸಮೀಪ ಕರ್ನಾಟಕ ತಾಪಂ ಕಚೇರಿಗೆ ತೆರಳುವ ರಸ್ತೆಯ ಬದಿಯಲ್ಲಿರುವ ಕುಡಿಯುವ ನೀರಿನ ವಾಲ್ವ್ ಸಡಿಲಗೊಂಡಿರುವ ಕಾರಣವೂ ಅಪಾರ ಪ್ರಮಾಣದ ನೀರು ದಿನವಿಡೀ ವ್ಯರ್ಥವಾಗುತ್ತಿದೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ದುರಸ್ತಿ ಕಾರ್ಯ ಕೈಗೊಳ್ಳದಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಸೋರಿಕೆಯಿಂದ ರಸ್ತೆ ಹಾಳಾಗುವ ಅಪಾಯ ಹೆಚ್ಚಿದ್ದು, ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೂ ಕಾರಣವಾಗುವ ಸಾಧ್ಯತೆ ಇದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ನೀರಿನ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವಾಗ, ಮತ್ತೊಂದೆಡೆ ಅಮೂಲ್ಯ ಕುಡಿಯುವ ನೀರು ಪೋಲಾಗುತ್ತಿರುವುದು ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಡೆದಿರುವ ಪೈಪ್‌ಗಳು ಹಾಗೂ ಸೋರಿಕೆಯಾಗುತ್ತಿರುವ ವಾಲ್ವ್‌ಗಳನ್ನು ತಕ್ಷಣ ದುರಸ್ತಿ ಮಾಡಿ ಕುಡಿಯುವ ನೀರಿನ ಪೋಲಾಗುವುದನ್ನು ತಡೆಗಟ್ಟುವಂತೆ ನಗರಸಭೆ ಮತ್ತು ಜಲವಿತರಣಾ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande

