Dailyhunt Logo
  • Light mode
    Follow system
    Dark mode
    • Play Story
    • App Story
ಮ್ಯಾನ್ಮಾರ್ ಅಧ್ಯಕ್ಷರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾತುಕತೆ

ಮ್ಯಾನ್ಮಾರ್ ಅಧ್ಯಕ್ಷರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾತುಕತೆ

ನವದೆಹಲಿ, 01 ಜೂನ್ (ಹಿ.ಸ.) :

ಯಂಕರ್ : ಭಾರತ ಪ್ರವಾಸದಲ್ಲಿರುವ ಮ್ಯಾನ್ಮಾರ್ ಅಧ್ಯಕ್ಷ ಯು ಮಿನ್ ಆಂಗ್ ಹ್ಲೈಂಗ್ ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೋಮವಾರ ಮಹತ್ವದ ಮಾತುಕತೆ ನಡೆಸಿದರು.

ಭಾರತ-ಮ್ಯಾನ್ಮಾರ್ ಗಡಿಭಾಗದ ಭದ್ರತೆ, ಉಗ್ರಗಾಮಿ ಚಟುವಟಿಕೆಗಳು ಹಾಗೂ ಈಶಾನ್ಯ ರಾಜ್ಯಗಳಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದ ವಿಷಯಗಳು ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದಿರುವುದಾಗಿ ತಿಳಿದು ಬಂದಿದೆ.

ಮ್ಯಾನ್ಮಾರ್ ಅಧ್ಯಕ್ಷರು ಶನಿವಾರ ಭಾರತಕ್ಕೆ ಆಗಮಿಸಿದ್ದು, ಮೊದಲಿಗೆ ಬಿಹಾರದ ಬೋಧಗಯಾಕ್ಕೆ ಭೇಟಿ ನೀಡಿ ಮಹಾಬೋಧಿ ದೇವಸ್ಥಾನ ಮತ್ತು ಸುಜಾತಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ಬಳಿಕ ಅದೇ ದಿನ ಸಂಜೆ ನವದೆಹಲಿಗೆ ಆಗಮಿಸಿದ್ದರು. ಶನಿವಾರ ಸಂಜೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಭಾನುವಾರ ಭಾರತ-ಮ್ಯಾನ್ಮಾರ್ ವ್ಯಾಪಾರ ವೇದಿಕೆಯ ಸಭೆಯಲ್ಲೂ ಭಾಗವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೈದರಾಬಾದ್ ಹೌಸ್ನಲ್ಲಿ ನಡೆಯಲಿರುವ ದ್ವಿಪಕ್ಷೀಯ ಸಭೆಗೆ ಮುನ್ನ ಅಜಿತ್ ದೋವಲ್ ಅವರು ಮ್ಯಾನ್ಮಾರ್ ಅಧ್ಯಕ್ಷರನ್ನು ಭೇಟಿಯಾಗಿ ಭದ್ರತಾ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.

ಭಾರತ-ಮ್ಯಾನ್ಮಾರ್ ಗಡಿಭಾಗದಲ್ಲಿ ನಡೆಯುತ್ತಿರುವ ಉಗ್ರಗಾಮಿ ಚಟುವಟಿಕೆಗಳು, ಗಡಿ ಭದ್ರತಾ ಪರಿಸ್ಥಿತಿ ಹಾಗೂ ಮ್ಯಾನ್ಮಾರ್ನ ಅಶಾಂತ ಪ್ರದೇಶಗಳಿಂದ ಮಣಿಪುರ ಮತ್ತು ಮಿಜೋರಾಂ ರಾಜ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಯಕ್ಕಾಗಿ ಆಗಮಿಸುತ್ತಿರುವ ಚಿನ್ ಸಮುದಾಯದ ಜನರ ವಿಚಾರಗಳು ಚರ್ಚೆಯ ಕೇಂದ್ರಬಿಂದುವಾಗಿದ್ದವು ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆಗಳು ಭಾರತದ ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಎರಡೂ ರಾಷ್ಟ್ರಗಳ ನಡುವೆ ಸಮನ್ವಯ ಅಗತ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇತ್ತೀಚೆಗೆ ಈಶಾನ್ಯ ಭಾರತದ ಉಗ್ರಗಾಮಿ ಸಂಘಟನೆಗಳಿಗೆ ಡ್ರೋನ್ ತರಬೇತಿ ನೀಡುವ ಉದ್ದೇಶದಿಂದ ಬಂದಿದ್ದ ವಿದೇಶಿ ನಾಗರಿಕರನ್ನು ಬಂಧಿಸಿರುವ ಘಟನೆಗಳ ಹಿನ್ನೆಲೆಯಲ್ಲಿ ಮ್ಯಾನ್ಮಾರ್ ಸರ್ಕಾರದೊಂದಿಗೆ ನಡೆಯುತ್ತಿರುವ ಈ ಉನ್ನತ ಮಟ್ಟದ ಮಾತುಕತೆ ವಿಶೇಷ ಮಹತ್ವ ಪಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಮ್ಯಾನ್ಮಾರ್ ಅಧ್ಯಕ್ಷ ಯು ಮಿನ್ ಆಂಗ್ ಹ್ಲೈಂಗ್ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ಭದ್ರತೆ, ಗಡಿ ನಿರ್ವಹಣೆ, ವ್ಯಾಪಾರ ಮತ್ತು ಪ್ರಾದೇಶಿಕ ಸಹಕಾರಕ್ಕೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada