Dailyhunt Logo
  • Light mode
    Follow system
    Dark mode
    • Play Story
    • App Story
ನಾಳೆ ಜನಜಾತಿ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂವಾದ

ನಾಳೆ ಜನಜಾತಿ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂವಾದ

ನವದೆಹಲಿ, 01 ಜೂನ್ (ಹಿ.ಸ.) :

ಯಂಕರ್ : ರಾಷ್ಟ್ರವ್ಯಾಪಿ 'ಜನಜಾತೀಯ ಗರಿಮಾ ಉತ್ಸವ'ದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಸುಮಾರು 200 ಪ್ರತಿಭಾವಂತ ಆದಿವಾಸಿ ವಿದ್ಯಾರ್ಥಿಗಳೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕೇಂದ್ರ ಜನಜಾತಿ ವ್ಯವಹಾರಗಳ ಸಚಿವಾಲಯದ ಪ್ರಮುಖ ವಿದ್ಯಾರ್ಥಿವೇತನ ಯೋಜನೆಗಳ ಫಲಾನುಭವಿಗಳೊಂದಿಗೆ ಈ ಸಂವಾದ ನಡೆಯಲಿದೆ.

ಜನಜಾತಿ ವ್ಯವಹಾರಗಳ ಸಚಿವಾಲಯದ ಮಾಹಿತಿಯ ಪ್ರಕಾರ, ಈ ಕಾರ್ಯಕ್ರಮವನ್ನು 'ಬಿರ್ಸಾ ಲೈವ್ಸ್ ಇನ್ ನ್ಯೂ ಭಾರತ್ ವೀಕ್' ಅಂಗವಾಗಿ ಆಯೋಜಿಸಲಾಗಿದೆ. ಭಗವಾನ್ ಬಿರ್ಸಾ ಮುಂಡಾ ಅವರ ಸ್ಫೂರ್ತಿದಾಯಕ ಪರಂಪರೆಯ ಸ್ಮರಣಾರ್ಥ ಮೇ 25ರಿಂದ ಜೂನ್ 2ರವರೆಗೆ ಈ ವಿಶೇಷ ವಾರವನ್ನು ಆಚರಿಸಲಾಗುತ್ತಿದೆ. ಇದೇ ವೇಳೆ ರಾಷ್ಟ್ರವ್ಯಾಪಿ 'ಜನಜಾತೀಯ ಗರಿಮಾ ಉತ್ಸವ'ವು ಮೇ 10ರಿಂದ ಜೂನ್ 9ರವರೆಗೆ ನಡೆಯುತ್ತಿದೆ.

ಶಿಕ್ಷಣದ ಮೂಲಕ ಸಬಲೀಕರಣ, ಸಾಮಾಜಿಕ ಒಳಗೊಳ್ಳುವಿಕೆ ಹಾಗೂ ರಾಷ್ಟ್ರ ನಿರ್ಮಾಣದತ್ತ ಕೇಂದ್ರ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಈ ಸಂವಾದವನ್ನು ಆಯೋಜಿಸಲಾಗಿದೆ. ಆದಿವಾಸಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಶ್ರೇಷ್ಠತೆ, ನಾಯಕತ್ವ ಮತ್ತು ನವೋದ್ಯಮದತ್ತ ಪ್ರೇರೇಪಿಸುವ ಮೂಲಕ 'ವಿಕಸಿತ ಭಾರತ್-2047' ಕನಸಿನ ಸಾಕಾರಕ್ಕೆ ಕೊಡುಗೆ ನೀಡುವ ಗುರಿಯನ್ನು ಕಾರ್ಯಕ್ರಮ ಹೊಂದಿದೆ.

ದೇಶದ ವಿವಿಧ ಭಾಗಗಳಿಂದ ಆಯ್ಕೆಯಾಗಿರುವ ಸುಮಾರು 200 ಪ್ರತಿಭಾವಂತ ಆದಿವಾಸಿ ವಿದ್ಯಾರ್ಥಿಗಳು ಈ ಐತಿಹಾಸಿಕ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಉನ್ನತ ಶಿಕ್ಷಣ, ಸಂಶೋಧನೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ಈ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಜನಜಾತಿ ವ್ಯವಹಾರಗಳ ಸಚಿವಾಲಯದ ಮೂರು ಪ್ರಮುಖ ವಿದ್ಯಾರ್ಥಿವೇತನ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಪರಿಶಿಷ್ಟ ಪಂಗಡಗಳಿಗಾಗಿ ರಾಷ್ಟ್ರೀಯ ಫೆಲೋಶಿಪ್ (ಎನ್‌ಎಫ್‌ಎಸ್ಟಿ), ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ ಹಾಗೂ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನ (ಎನ್‌ಒಎಸ್) ಯೋಜನೆಗಳ ಅಡಿಯಲ್ಲಿ ಅವರು ನೆರವು ಪಡೆದಿದ್ದಾರೆ.

ಸಚಿವಾಲಯದ ಪ್ರಕಾರ, ಈ 200 ವಿದ್ಯಾರ್ಥಿಗಳು ಆದಿವಾಸಿ ಸಮುದಾಯಗಳ ಅತ್ಯಂತ ಪ್ರತಿಭಾವಂತ ಯುವಕರನ್ನು ಪ್ರತಿನಿಧಿಸುತ್ತಿದ್ದು, ಉನ್ನತ ಸಂಶೋಧನೆ, ಉನ್ನತ ಶಿಕ್ಷಣ ಮತ್ತು ಅಂತಾರಾಷ್ಟ್ರೀಯ ಶೈಕ್ಷಣಿಕ ಚಟುವಟಿಕೆಗಳ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ನಡೆಯಲಿರುವ ಈ ಸಂವಾದವು ಆದಿವಾಸಿ ಯುವಜನತೆಗೆ ಹೊಸ ಪ್ರೇರಣೆ ನೀಡುವ ಜೊತೆಗೆ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯ ಮೂಲಕ ಸಮಗ್ರ ಅಭಿವೃದ್ಧಿಯ ಸಂದೇಶವನ್ನು ಸಾರುವ ಮಹತ್ವದ ಕಾರ್ಯಕ್ರಮವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada