Dailyhunt Logo
  • Light mode
    Follow system
    Dark mode
    • Play Story
    • App Story
ನಗರಗಳತ್ತ ವಲಸೆ ತಡೆಯಲು ಉದ್ಯೋಗ, ಶಿಕ್ಷಣಕ್ಕೆ ಆದ್ಯತೆ: ಸಿಎಂ ಡಿ.ಕೆ. ಶಿವಕುಮಾರ್

ನಗರಗಳತ್ತ ವಲಸೆ ತಡೆಯಲು ಉದ್ಯೋಗ, ಶಿಕ್ಷಣಕ್ಕೆ ಆದ್ಯತೆ: ಸಿಎಂ ಡಿ.ಕೆ. ಶಿವಕುಮಾರ್

ಕಲಬುರಗಿ, 07 ಜುಲೈ (ಹಿ.ಸ.):

ಯಂಕರ್:ನಗರಗಳತ್ತ ಜನರ ವಲಸೆ ತಡೆಯಲು ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮಗಳಿಗೆ ಉತ್ತೇಜನ ನೀಡಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಸಿಎಸ್‌ಆರ್ ಮಾದರಿಯಲ್ಲಿ 2,000 ಶಾಲೆಗಳ ನಿರ್ಮಾಣಕ್ಕೂ ಸರ್ಕಾರ ಯೋಜನೆ ರೂಪಿಸಿದೆ ಎಂದು ಹೇಳಿದರು.

ಕಲಬುರ್ಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಅವರು, ಉದ್ಯಮಗಳನ್ನು ಆಕರ್ಷಿಸಲು ಪ್ರಿಮಿಯಂ ಎಫ್‌ಎಆರ್‌ನಲ್ಲಿ ಸಡಿಲಿಕೆ ಹಾಗೂ ಎರಡು ಪಟ್ಟು ಎಫ್‌ಎಆರ್ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಕಡಿಮೆ ವೆಚ್ಚದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ ಎಂದರು.

ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ನಗರಗಳಿಗೆ ವಲಸೆ ಹೋಗದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿಎಸ್‌ಆರ್ ಶಾಲೆಗಳನ್ನು ನಿರ್ಮಿಸಲಾಗುವುದು. ಕಂಪನಿಗಳು ಕಟ್ಟಡ ಹಾಗೂ ಮೂಲಸೌಕರ್ಯ ಒದಗಿಸಲಿದ್ದು, ಶಿಕ್ಷಕರ ನೇಮಕಕ್ಕೆ ಪ್ರತ್ಯೇಕ ಮಾರ್ಗಸೂಚಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಖಾಸಗಿ ಉದ್ಯೋಗ ಕ್ಷೇತ್ರದಲ್ಲಿ ಕೌಶಲ್ಯಾಧಾರಿತ ನೇಮಕಾತಿಗೆ 'ಯುವ ಸೇತು' ಯೋಜನೆ ಜಾರಿಗೊಳಿಸಲಾಗುತ್ತಿದೆ. ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ತರಬೇತಿ ಪಡೆದ ಯುವಕರನ್ನು ಈ ವೇದಿಕೆಯ ಮೂಲಕ ಕಂಪನಿಗಳು ನೇಮಕ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಮತದಾರರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಮತದಾನದ ಹಕ್ಕು ರಕ್ಷಿಸುವುದು ಸರ್ಕಾರದ ಬದ್ಧತೆಯಾಗಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಬಿಎಲ್‌ಒಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಅಗತ್ಯ ದಾಖಲೆಗಳಾದ ನಿವಾಸ ಹಾಗೂ ಜಾತಿ ಪ್ರಮಾಣಪತ್ರಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು.

ಕಂದಾಯ ಇಲಾಖೆಯಲ್ಲಿ ಇ-ಖಾತೆ, ಪೋಡಿ ಹಾಗೂ ಆಸ್ತಿ ದಾಖಲೆಗಳ ಸರಿಪಡಿಸುವ ಕಾರ್ಯವನ್ನು ವೇಗಗೊಳಿಸಿ, ಲಂಚವಿಲ್ಲದೆ ಸೇವೆ ಒದಗಿಸಲು ಸೂಚನೆ ನೀಡಲಾಗಿದೆ ಎಂದರು. ಜನರ ಸಮಸ್ಯೆಗಳಿಗೆ ಸ್ಪಂದಿಸಲು 'ಪ್ರಜಾಸೇವೆ' ಅಭಿಯಾನ ಆರಂಭಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ನಿಯಮಿತವಾಗಿ ಜನಸಂಪರ್ಕ ನಡೆಸಲಿದ್ದಾರೆ ಎಂದು ಹೇಳಿದರು.

ಯುವಕರ ಕೌಶಲ್ಯ, ನಾಯಕತ್ವ ಮತ್ತು ಸಾಮರಸ್ಯ ಬೆಳೆಸಲು ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ 10 ಸಾವಿರ 'ಭಾರತ ಜೋಡೋ ಯುವಕರ ಸಂಘ' ಸ್ಥಾಪಿಸಲಾಗುವುದು. ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು ಎಂದು ಘೋಷಿಸಿದರು.

ಇದೇ ವೇಳೆ, ಕಲಬುರ್ಗಿಯಲ್ಲಿ 320 ಕೋಟಿ ರೂಪಾಯಿ ವೆಚ್ಚದಲ್ಲಿ ಜವಳಿ ಪಾರ್ಕ್ ಸ್ಥಾಪನೆ, ಬಡವರಿಗೆ ನಿವೇಶನ ಹಂಚಿಕೆ, ಬೆಳೆ ವಿಮೆ ಪರಿಹಾರದ ಬಾಕಿ ಮೊತ್ತ ಬಿಡುಗಡೆ ಹಾಗೂ ವಿವಿಧ ಇಲಾಖೆಗಳ 72 ಸಾವಿರ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದರು.

ರೈತರ ಸಾಲಮನ್ನಾ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಅದು ಸುಲಭದ ನಿರ್ಧಾರವಲ್ಲ, ಆದರೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada