Dailyhunt Logo
  • Light mode
    Follow system
    Dark mode
    • Play Story
    • App Story
ಪರಿಶಿಷ್ಟರ ಮೀಸಲಾತಿ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ: ವಿಜಯೇಂದ್ರ

ಪರಿಶಿಷ್ಟರ ಮೀಸಲಾತಿ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ: ವಿಜಯೇಂದ್ರ

ಬೆಂಗಳೂರು, 13 ಅಕ್ಟೋಬರ್ (ಹಿ.ಸ.):

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳವನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಪರಿಶಿಷ್ಟರ ಹಿತ ಕಾಯುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಕಾಂಗ್ರೆಸ್ ಸರ್ಕಾರ ಬದ್ಧತೆಯಿಂದ ಹೋರಾಡದ ಪರಿಣಾಮ ಸಾಮಾಜಿಕ ನ್ಯಾಯದ ಮೀಸಲಾತಿ ಹಕ್ಕನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಹಿನ್ನಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳ ಕುರಿತು ಕಾಂಗ್ರೆಸ್ ಎಂದಿಗೂ ದೂರದೃಷ್ಟಿಯ ಯೋಜನೆ ರೂಪಿಸಿಲ್ಲ. ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಹೆಚ್ಚಿಸುವ ನಿರ್ಧಾರವನ್ನು ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕೈಗೊಂಡಿತ್ತು. ಪರಿಶಿಷ್ಟ ಜಾತಿಗೆ ಶೇ. 2 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 4ರಷ್ಟು ಮೀಸಲಾತಿ ಹೆಚ್ಚಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಬದ್ಧತೆಯಿಂದ ಹೆಚ್ಚಿಸಿದ್ದ ಮೀಸಲಾತಿಯನ್ನು ಉಳಿಸಿಕೊಳ್ಳಲು ಈಗಿನ ಸರ್ಕಾರಕ್ಕೆ ಸಾಧ್ಯವಾಗದಿರುವುದು ದೌರ್ಭಾಗ್ಯಕರ. ಮೀಸಲಾತಿ ಸೌಲಭ್ಯವನ್ನು ಒದಗಿಸುವುದಿರಲಿ, ಈಗಾಗಲೇ ಕಲ್ಪಿಸಲಾಗಿದ್ದ ಸೌಲಭ್ಯವನ್ನೂ ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಟೀಕಿಸಿದ್ದಾರೆ.

ಸರ್ಕಾರ ತಕ್ಷಣವೇ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಪರಿಶಿಷ್ಟ ಸಮುದಾಯದ ಪರವಾಗಿ ಬಿಜೆಪಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada