Dailyhunt Logo
  • Light mode
    Follow system
    Dark mode
    • Play Story
    • App Story
ರಾಜ್ಯಕ್ಕೆ 500 ಹೊಸ ಜಿಸಿಸಿ ಕೇಂದ್ರಗಳ ಗುರಿ:ಮುಖ್ಯಮಂತ್ರಿ ಡಿಕೆ ಶಿವಕುಮಾರ್

ರಾಜ್ಯಕ್ಕೆ 500 ಹೊಸ ಜಿಸಿಸಿ ಕೇಂದ್ರಗಳ ಗುರಿ:ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಬೆಂಗಳೂರು, 08 ಜುಲೈ (ಹಿ.ಸ.):

ಆಯಂಕರ್:

ರಾಜ್ಯದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕರ್ನಾಟಕ ಡಿಜಿಟಲ್ ಆರ್ಥಿಕತೆ ಮಿಷನ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 'ಕ್ಯಾಟಲಿಸ್ಟ್ ಕನೆಕ್ಟ್' ಸಭೆಯಲ್ಲಿ 150ಕ್ಕೂ ಹೆಚ್ಚು ಜಿಸಿಸಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಅವರು ಸಮಾಲೋಚನೆ ನಡೆಸಿದರು.

2029ರೊಳಗೆ 500 ಹೊಸ ಜಿಸಿಸಿ ಕೇಂದ್ರಗಳನ್ನು ರಾಜ್ಯಕ್ಕೆ ಆಕರ್ಷಿಸಿ, 3.5 ಲಕ್ಷ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವುದು ಹಾಗೂ ₹4.76 ಲಕ್ಷ ಕೋಟಿ ಆರ್ಥಿಕ ಮೌಲ್ಯ ನಿರ್ಮಾಣದ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಲಾಯಿತು. ಜಾಗತಿಕ ಮಟ್ಟದ ಪ್ರತಿಭೆ, ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ಭರವಸೆಯನ್ನು ಸರ್ಕಾರ ನೀಡಿದೆ.

ಸಭೆಯಲ್ಲಿ ಗೃಹ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಎಂ. ಖರ್ಗೆ, ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಉದ್ಯಮ-ಸರ್ಕಾರದ ಸಹಭಾಗಿತ್ವ, ಹೂಡಿಕೆ ಸುಗಮೀಕರಣ, ಕೌಶಲ್ಯಾಭಿವೃದ್ಧಿ, ಸಂಶೋಧನೆ, ನಾವೀನ್ಯತೆ ಹಾಗೂ ಬೆಂಗಳೂರು ಹೊರ ಭಾಗಕ್ಕೂ ಜಿಸಿಸಿ ಹೂಡಿಕೆ ವಿಸ್ತರಣೆ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಇದಕ್ಕೂ ಮುನ್ನ ಡಿ.ಕೆ. ಶಿವಕುಮಾರ್ ಅವರು ಟಾರ್ಗೆಟ್ ಇಂಡಿಯಾದ ಬೆಂಗಳೂರು ಕ್ಯಾಂಪಸ್‌ಗೆ ಭೇಟಿ ನೀಡಿ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಸಭೆಯಲ್ಲಿ ಗೂಗಲ್, ಇಂಟೆಲ್, ಐಬಿಎಂ, ನೋಕಿಯಾ, ಬಾಷ್, ಜೆಪಿ ಮೋರ್ಗನ್ ಚೇಸ್, ಎಚ್‌ಎಸ್‌ಬಿಸಿ ಸೇರಿದಂತೆ ಹಲವು ಬಹುರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ರಾಜ್ಯದ ಜಿಸಿಸಿ ಪರಿಸರ ವ್ಯವಸ್ಥೆ ಮತ್ತಷ್ಟು ಬಲಪಡಿಸುವ ಕುರಿತು ಸಲಹೆಗಳನ್ನು ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada