Dailyhunt Logo
  • Light mode
    Follow system
    Dark mode
    • Play Story
    • App Story
ರೈತರ ಹಕ್ಕುಗಳ ಮೊಟಕುಗೊಳಿಸಿದ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ರೈತರ ಹಕ್ಕುಗಳ ಮೊಟಕುಗೊಳಿಸಿದ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಕೋಲಾರ, 08 ಅಕ್ಟೋಬರ್ (ಹಿ.ಸ) :

ರೈತರು ನಿದ್ದೆ ಮಾಡುವ ಸಂದರ್ಭವನ್ನು ಬಳಸಿಕೊಂಡು ಬೆಳಗಿನ ಜಾವ ಪೊಲೀಸ್ ಬೆಂಗಾವಲಿನಲ್ಲಿ ತೋಟಗಳಿಗೆ ನುಗ್ಗಿ ಬೆಳೆ ಹಾಗೂ ಮರಗಳನ್ನು ಜೆಸಿಬಿ ಮೂಲಕ ನಾಶಪಡಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ರೈತರ ಹಕ್ಕುಗಳ ಅರಿವಿನಿಂದ ಅರಣ್ಯ ಅಧಿಕಾರಿಗಳಿಗೆ ನಡುಕ ಬಂದಿದೆ ಎಂದು ಭೂಸಂತ್ರಸ್ತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಆರ್.

ಶ್ರೀನಿವಾಸನ್ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿದ ಅವರು ಹುತ್ತೂರು ಹೋಬಳಿಯ ಹರಟಿ ಗ್ರಾಮದ ವೆಂಕಟೇಶ್ ಗೌಡ ಅವರ ತೋಟಕ್ಕೆ ಬೆಳಗಿನ ಜಾವ ೩ ಗಂಟೆ ಸುಮಾರಿಗೆ ನುಗ್ಗಿದ ಅಧಿಕಾರಿಗಳು ಬೆಳೆಗಳನ್ನು ನಾಶಪಡಿಸಿದ್ದಾರೆ. ಗ್ರಾಮೀಣ ಬ್ಯಾಂಕ್ನಲ್ಲಿ ₹೧೫ ಲಕ್ಷ ಸಾಲ ಮಾಡಿಕೊಂಡಿರುವ ಅವರು ಇದೀಗ ಬೀದಿಗೆ ಬಿದ್ದಿದ್ದಾರೆ. ಇದೇ ರೀತಿ ಮೂರು ದಿನಗಳ ಕಾಲ ರೈತರು ಬೆಳೆದಿದ್ದ ಭತ್ತ, ರಾಗಿ, ಜೋಳ, ಟೊಮ್ಯಾಟೊ, ಬದನೆಕಾಯಿ, ಹುರುಳಿಕಾಯಿ ಸೇರಿದಂತೆ ವಿವಿಧ ಬೆಳೆಗಳು ಹಾಗೂ ಮಾವು, ತೆಂಗು, ಶ್ರೀಗಂಧ, ಹಲಸು, ತೇಗ ಸೇರಿದಂತೆ ಮರಗಳನ್ನು ನಾಶಪಡಿಸಲಾಗಿದೆ ಎಂದು ಆರೋಪಿಸಿದರು.

ಕೋಲಾರ ತಾಲ್ಲೂಕಿನ ಹುತ್ತೂರು ಹೋಬಳಿಯ ವಿವಿಧ ಗ್ರಾಮಗಳ ಸರ್ಕಾರಿ ಗೋಮಾಳದ ಒಟ್ಟು ೧,೩೧೩ ಎಕರೆ ೨೨ ಗುಂಟೆ ಜಮೀನಿಗೆ ಸಂಬಂಧಿಸಿದ ಅರಣ್ಯ ಹಾಗೂ ಕಂದಾಯ ದಾಖಲೆಗಳ ಬಗ್ಗೆ ಸ್ಪಷ್ಟತೆ ಅಗತ್ಯವಿದೆ. ಅಂದಿನ ಅಧಿಕಾರಿಗಳ ನಿರ್ಣಯಗಳು, ಅರಣ್ಯ ಕಾಯ್ದೆಯ ವಿವಿಧ ಪ್ರಕ್ರಿಯೆಗಳು ಹಾಗೂ ಮೈಸೂರು ಗೆಜೆಟ್ನಲ್ಲಿ ಪ್ರಕಟಗೊಂಡ ದಾಖಲೆಗಳನ್ನು ಪರಿಗಣಿಸಬೇಕು ಎಂದು ಅವರು ಹೇಳಿದರು.

ರೈತರ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳು ಸರಿಯಾಗಿದ್ದರೆ ಅರಣ್ಯ ಅಧಿಕಾರಿಗಳು ಸಚಿವರು ಹಾಗೂ ಮೇಲಧಿಕಾರಿಗಳ ಮುಂದೆ ಮನವಿ ಸಲ್ಲಿಸುವ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳು ಸರ್ಕಾರದ ದಾಖಲೆಗಳನ್ನು ಮರೆಮಾಚುವುದು ಅಥವಾ ತಿದ್ದುವುದು, ಸುತ್ತೋಲೆಗಳನ್ನು ಪಾಲಿಸದೆ ದೌರ್ಜನ್ಯ ನಡೆಸುವುದು ನಿಲ್ಲಬೇಕು ಎಂದರು.

ಅರಣ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ರೈತರಿಗೆ ಆಗಿರುವ ನಷ್ಟ ಹಾಗೂ ದೌರ್ಜನ್ಯದ ಕುರಿತು ಅರಣ್ಯ ಇಲಾಖೆಯ ಮೇಲಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ತೀರ್ಮಾನಿಸುವುದಾಗಿ ತಿಳಿಸಿದ್ದಾರೆ. ರೈತರ ಸಂಕಷ್ಟವನ್ನು ಪರಿಗಣಿಸಿ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದರು.

ರೈತರ ಬೆಳೆ ಮತ್ತು ಆಸ್ತಿಗೆ ಹಾನಿ ಮಾಡಿದ ಅಧಿಕಾರಿಗಳ ವಿರುದ್ಧ ಕಾನೂನುಬದ್ಧವಾಗಿ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಶ್ರೀನಿವಾಸನ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada