Dailyhunt
ಸಂಸತ್ತಿನ ವಿಶೇಷ ಅಧಿವೇಶನ ಏಕಪಕ್ಷೀಯ ನಿರ್ಧಾರ : ಕಾಂಗ್ರೆಸ್ ಆರೋಪ

ಸಂಸತ್ತಿನ ವಿಶೇಷ ಅಧಿವೇಶನ ಏಕಪಕ್ಷೀಯ ನಿರ್ಧಾರ : ಕಾಂಗ್ರೆಸ್ ಆರೋಪ

ನವದೆಹಲಿ, 03 ಏಪ್ರಿಲ್ (ಹಿ.ಸ.) :

ಯಂಕರ್ : ಏಪ್ರಿಲ್ 16ರಿಂದ 18ರವರೆಗೆ ಕರೆಯಲಾಗಿರುವ ಸಂಸತ್ತಿನ ವಿಶೇಷ ಅಧಿವೇಶನ ಏಕಪಕ್ಷೀಯ ನಿರ್ಧಾರ ಎಂದು ಕಾಂಗ್ರೆಸ್ ಆರೋಪಿಸಿದೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈ ರಾಮಂ ರಮೇಶ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವೆ ನಡೆದ ಪತ್ರವ್ಯವಹಾರವನ್ನು ವಿವರಿಸಿ, ಸರ್ಕಾರದ ಉದ್ದೇಶಗಳನ್ನು ಪ್ರಶ್ನಿಸಿದರು.

ಮಾರ್ಚ್ 16ರಂದು ರಿಜಿಜು ಅವರು 'ನಾರಿ ಶಕ್ತಿ ವಂದನ ಕಾಯ್ದೆ' ಕುರಿತು ಚರ್ಚೆಗೆ ಆಹ್ವಾನಿಸಿದರೆ, ಅದಕ್ಕೆ ಪ್ರತಿಕ್ರಿಯೆಯಾಗಿ ಖರ್ಗೆ ಸರ್ವಪಕ್ಷ ಸಭೆ ಕರೆದ ಬಳಿಕ ಲಿಖಿತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರು. ನಂತರ ಮಾರ್ಚ್ 24ರಂದು, ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಏಪ್ರಿಲ್ 29 ನಂತರ ಸಭೆ ನಡೆಸುವಂತೆ ಪ್ರತಿಪಕ್ಷಗಳು ಸಲಹೆ ನೀಡಿದವು.

ಆದರೆ, ಮಾರ್ಚ್ 26ರಂದು ಮತ್ತೆ ಪತ್ರ ಬರೆದ ರಿಜಿಜು, ಸಂವಿಧಾನ ತಿದ್ದುಪಡಿ ವಿಚಾರದಲ್ಲಿ ಕಾಂಗ್ರೆಸ್ ಸಭೆಗೆ ಬರಬೇಕೆಂದು ಒತ್ತಾಯಿಸಿದರು. ಇದಕ್ಕೂ ಖರ್ಗೆ ಪ್ರತಿಕ್ರಿಯಿಸಿ, ಎಲ್ಲ ಪಕ್ಷಗಳೊಂದಿಗೆ ಚರ್ಚೆ ನಡೆಸಿ ನಂತರವೇ ಮುಂದುವರೆಯಬೇಕು ಎಂದು ಹೇಳಿದರು.

ಈ ಎಲ್ಲ ಪತ್ರವ್ಯವಹಾರಗಳ ನಡುವೆಯೇ, ಸರ್ಕಾರವು ಈಗಾಗಲೇ ವಿಶೇಷ ಅಧಿವೇಶನವನ್ನು ಕರೆಯಲು ನಿರ್ಧರಿಸಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ. ಅಂತಿಮವಾಗಿ, ಏಪ್ರಿಲ್ 16, 17 ಮತ್ತು 18ರಂದು ಅಧಿವೇಶನ ನಡೆಸುವ ನಿರ್ಧಾರ ಪ್ರಕಟಿಸಲಾಯಿತು.

ಕಾಂಗ್ರೆಸ್ ಪ್ರಕಾರ, ಈ ಅಧಿವೇಶನವು 'ನಾರಿ ಶಕ್ತಿ ವಂದನ ಕಾಯ್ದೆ' ಮಾತ್ರವಲ್ಲದೆ ಗಡಿ ನಿರ್ಣಯ (ಡಿಲಿಮಿಟೇಶನ್) ವಿಷಯಗಳನ್ನೂ ಒಳಗೊಂಡಿರುತ್ತದೆ. ಆದರೆ, ಈ ಕುರಿತು ಪ್ರತಿಪಕ್ಷಗಳಿಗೆ ಪೂರ್ವ ಮಾಹಿತಿ ನೀಡಲಾಗಿಲ್ಲ ಎಂದು ರಮೇಶ್ ಹೇಳಿದರು.

ಇದೇ ವೇಳೆ, ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಹಾಗೂ ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ಈ ಅಧಿವೇಶನವನ್ನು ಕರೆಯಲಾಗಿದೆ ಎಂಬುದನ್ನೂ ಕಾಂಗ್ರೆಸ್ ಪ್ರಶ್ನಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada