ಗದಗ, 04 ಏಪ್ರಿಲ್ (ಹಿ.ಸ.) :
ಆಯಂಕರ್ : ತಲತಲಾಂತರಗಳಿಂದ ಸವಿತಾ ಸಮಾಜವು ನಂಬಿಕೊಂಡು ಬಂದಿರುವ ಪರಂಪರಾಗತ ಕ್ಷೌರಿಕ (ಬಾರ್ಬರ್) ವೃತ್ತಿಯ ಅಸ್ಮಿತೆಗೆ ಧಕ್ಕೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಅಸಂಘಟಿತ ಕಾರ್ಮಿಕ ಕಾರ್ಡ್ಗಳಲ್ಲಿ ಉಂಟಾಗಿರುವ ತಾಂತ್ರಿಕ ದೋಷಗಳನ್ನು ಕೂಡಲೇ ಸರಿಪಡಿಸುವಂತೆ ಗದಗ ಜಿಲ್ಲಾ ಸವಿತಾ ಸಮಾಜ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ಅವರು, ಕಾರ್ಮಿಕ ಇಲಾಖೆಯ ನಿರ್ಲಕ್ಷ್ಯದಿಂದ ಸಮುದಾಯದ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೌರಿಕ ವೃತ್ತಿಯು ಸವಿತಾ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಬ್ಯೂಟಿ ಪಾರ್ಲರ್ಗಳಲ್ಲಿ ಕಾರ್ಯನಿರ್ವಹಿಸುವವರಿಗೂ 'ಬಾರ್ಬರ್' ಎಂದು ನಮೂದಿಸಿ ಗುರುತಿನ ಚೀಟಿ ನೀಡುತ್ತಿರುವುದು ಗಂಭೀರ ದೋಷವಾಗಿದೆ ಎಂದು ಅವರು ಹೇಳಿದರು. ಬ್ಯೂಟಿ ಪಾರ್ಲರ್ ಹಾಗೂ ಪರಂಪರಾಗತ ಕ್ಷೌರಿಕ ವೃತ್ತಿಗಳ ನಡುವೆ ಸಾಂಸ್ಕೃತಿಕ ಮತ್ತು ತಾಂತ್ರಿಕವಾಗಿ ಭಾರೀ ವ್ಯತ್ಯಾಸವಿದ್ದು, ಎರಡನ್ನೂ ಒಂದೇ ವರ್ಗದಲ್ಲಿ ಸೇರಿಸಿರುವುದು ವೃತ್ತಿಪರ ನೈತಿಕತೆಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು.
ಇದೇ ವೇಳೆ, ಸರ್ಕಾರವು ಸವಿತಾ ಸಮಾಜದ ಅಭಿವೃದ್ಧಿಗಾಗಿ ನೀಡುವ ಆರ್ಥಿಕ ನೆರವು, ಉಪಕರಣಗಳ ಸಹಾಯಧನ ಮತ್ತು ವಿಮಾ ಸೌಲಭ್ಯಗಳು ಅನರ್ಹರಿಗೆ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾರ್ಮಿಕ ಇಲಾಖೆಯ ಸಾಫ್ಟ್ವೇರ್ನಲ್ಲಿ 'ಬ್ಯೂಟಿಷಿಯನ್' ಎಂಬ ಪ್ರತ್ಯೇಕ ವಿಭಾಗದ ಅಭಾವವೇ ಈ ಗೊಂದಲಕ್ಕೆ ಕಾರಣವಾಗಿದ್ದು, ಇದರಿಂದ ಮೂಲ ವೃತ್ತಿ ನಿರತರಿಗೆ ಸಿಗಬೇಕಾದ ಸೌಲಭ್ಯಗಳು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಈ ಸಮಸ್ಯೆಗೆ ಪರಿಹಾರವಾಗಿ, ಕಾರ್ಮಿಕ ಇಲಾಖೆಯ ನೋಂದಣಿ ತಂತ್ರಾಂಶದಲ್ಲಿ ತಕ್ಷಣ ಬದಲಾವಣೆ ತಂದು, ಬ್ಯೂಟಿ ಪಾರ್ಲರ್ ಕೆಲಸಗಾರರಿಗೆ 'ಬ್ಯೂಟಿಷಿಯನ್' ಎಂಬ ಪ್ರತ್ಯೇಕ ಗುರುತಿನ ಕಾರ್ಡ್ ನೀಡಬೇಕು. ಸವಿತಾ ಸಮಾಜದ ಮೂಲ ವೃತ್ತಿ ಬಾಂಧವರಿಗೆ ಮಾತ್ರ 'ಬಾರ್ಬರ್' (ಕ್ಷೌರಿಕ) ಗುರುತನ್ನು ಕಾಯ್ದಿರಿಸಬೇಕು. ಈಗಾಗಲೇ ತಪ್ಪಾಗಿ ವಿತರಿಸಲಾದ ಕಾರ್ಡ್ಗಳನ್ನು ಗುರುತಿಸಿ ರದ್ದುಪಡಿಸುವುದು ಅಥವಾ ತಿದ್ದುಪಡಿ ಮಾಡುವುದು ಅಗತ್ಯ ಎಂದು ಆಗ್ರಹಿಸಿದರು.
ಈ ಕುರಿತು ಈಗಾಗಲೇ ಗದಗ ಜಿಲ್ಲಾ ಕಾರ್ಮಿಕ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಲಿಖಿತ ಮನವಿಗೆ ಸ್ಪಂದಿಸುವ ಭರವಸೆ ನೀಡಲಾಗಿದೆ. ಒಂದು ವೇಳೆ ಸರ್ಕಾರ ಮತ್ತು ಇಲಾಖೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP

