Wednesday, 16 Sep, 9.47 pm Hindusthan Samachar

ಸುದ್ದಿ
ಶಿಷ್ಟಾಚಾರ ಉಲ್ಲಂಘನೆ ಸದನದ ಹಕ್ಕುಬಾಧ್ಯತಾ ಸಮಿತಿಗೆ ಸಚಿವ ನಾಗೇಶ್‍ರಿಂದ ಅಧಿಕಾರಿಗಳ ವಿರುದ್ಧ ದೂರು

ಶಿಷ್ಟಾಚಾರ ಉಲ್ಲಂಘನೆ ಸದನದ ಹಕ್ಕುಬಾಧ್ಯತಾ ಸಮಿತಿಗೆ ಸಚಿವ ನಾಗೇಶ್‍ರಿಂದ ಅಧಿಕಾರಿಗಳ ವಿರುದ್ಧ ದೂರು

ಕೋಲಾರ ಸೆ 16 (ಹಿ.ಸ): ಭಾನುವಾರ ನಡೆದ ಕೆ.ಸಿ.ವ್ಯಾಲಿ ಬಾಗಿನ ಅರ್ಪಣೆ ಕಾರ್ಯಕ್ರಮ ಈಗ ವಿವಾಧವನ್ನು ಸೃಷ್ಠಿಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‍ರವರನ್ನು ದೂರ ಇಟ್ಟು ಬಾಗಿನ ಅರ್ಪಿಸಲಾಗಿತ್ತು. ಇದರಿಂದ ನಾಗೇಶ್ ಸಿಟ್ಟುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೋಲಾರ ತಹಸೀಲ್ದಾರ್ ವಿರುದ್ಧ ಸಚಿವ ನಾಗೇಶ್ ಗುಡುಗಿದ್ದಾರೆ. ಶಿಷ್ಠಾಚಾರ ಉಲ್ಲಂಘನೆ ಮಾಡಿ ಭಾನುವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೀರಿ. ನನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆ.ಸಿ.ವ್ಯಾಲಿ ನೀರಿನಿಂದ ತುಂಬಿ ಕೋಡಿ ಬಿದ್ದಿರುವ ಎಸ್. ಅಗ್ರಹಾರ ಕೆರೆಯ ಬಾಗೀನ ಅರ್ಪಿಸುವ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಶಿಷ್ಠಾಚಾರ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕರ್ನಾಟಕ ವಿಧಾನಸಭೆಯ ಹಕ್ಕು ಭಾದ್ಯತಾ ಸಮಿತಿಗೆ ದೂರು ನೀಡಲಾಗಿದೆ ಎಂದು ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ನಾಗೇಶ್ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿಯಲ್ಲಿ ಬುಧವಾರ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಬಾಗೀನ ಕಾರ್ಯಕ್ರಮಕ್ಕೆ ನನಗೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಉಪವಿಬಾಗಾಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ಅಲ್ಲದೆ ಭಾನುವಾರ ರಜಾ ದಿನ ಕಾರ್ಯಕ್ರಮ ಹಮ್ಮಿಕೊಂಡು ಕೆಲವು ಅಧಿಕಾರಿಗಳು ಭಾಗವಹಿಸಿದ್ದಾರೆ. ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಲಾಗುವುದು ಎಂದು ತಿಳಿಸಿದರು.

ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಮೇಲೂ ಕ್ರಮ:

ಬಾಗೀನ ಅರ್ಪಿಸುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನೀಯರ್ ಕೃಷ್ಣ ಹಾಗು ಎಂಜಿನೀಯರ್ ಸುರೇಶ್ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಅವರನ್ನೂ ಜಿಲ್ಲೆಯಿಂದ ಹೊರಗೆ ಕಳಿಸಲಾಗುವುದು ಇಂತಹ ಬೇಜಾವಾಬ್ದಾರಿ ಅಧಿಕಾರಿಗಳು ಬೇಕಾಗಿಲ್ಲ ಅಂದರು. ಇದು ದುರಾಂಕಾರದ ಪರಮಾವಧಿ,ಜಿಲ್ಲಾ ಮಂತ್ರಿಯಾಗಿರುವ ನನಗೂ ಒಂದು ಮಾತು ಹೇಳದೆ ಅವರು ಬಾಗೀನ ಅರ್ಪಿಸುವ ಕಾರ್ಯಕ್ರಮ ನಡೆಸಿದ್ದಾರೆ.ಅದಕ್ಕೆ ಅವರಿಗೆ ತಕ್ಕ ಶಾಸ್ತಿ ಆಗಲಿದೆ ಎಂದರು.

ನಗರಸಭೆಯ ಮೇಲೂ ದೂರುಗಳಿವೆ:

ಕೋಲಾರ ನಗರಸಭೆ ಆಯುಕ್ತ ಶ್ರೀಕಾಂತ್ ಅವರ ಆಡಳಿತ ವೈಖರಿಯೂ ಸರಿಯಿಲ್ಲ, ಅವರ ಮೇಲೂ ಸಾಕಷ್ಟು ದೂರುಗಳಿವೆ,ಅವರೂ ಯರ್ರಾಬಿರಿ ಖಾತೆಗಳನ್ನು ಮಾಡಿರುವುದು ನನ್ನ ಗಮನಕ್ಕೆ ಬಂದಿದೆ, ನಗರಸಭೆಯಲ್ಲಿ ಆಗಿರುವ ಲೋಪಗಳನ್ನು ತನಿಖೆ ನಡೆಸಲಾಗುವುದು ಸಧ್ಯದಲ್ಲಿಯೇ ಅದಕ್ಕೊಂದು ಸಮಿತಿ ರಚಿಸಲಾಗುವುದು ಎಂದ ಸಚಿವರು ಆಯುಕ್ತ ಶ್ರೀಕಾಂತ್‍ಗೆ ವರ್ಗಾವಣೆ ಆಗಿದೆ ಆದರೂ ಇಲ್ಲಿಯೇ ಇದ್ದಾರೆ ಅದನ್ನೂ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ನಗರದ ಎಂಜಿ ರಸ್ತೆಗೆ ಹೊಂದಿಕೊಂಡಂತಿರುವ ಸುಮಾರು 80 ಕೋಟಿ ರೂ ಬೆಲೆ ಬಾಳುವ ಕನ್ಸರ್‍ವೆನ್ಸಿಯನ್ನು ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದಾರೆ ಎಂದು ಸಾರ್ವಜನಿಕರೊಬ್ಬರು ದೂರು ನೀಡಿದ್ದಾರೆ ಅದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಇನ್ನು ಮೇಲೆ ಇಂತಹ ಅಚಾತುರ್ಯಗಳು ಆಗದಂತೆ ಎಚ್ಚರ ವಹಿಸಲು ಶೀಘ್ರದಲ್ಲಿಯೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗುವುದು, ಎಲ್ಲ ಇಲಾಖೆ ಅಧಿಕಾರಿಗಳಿಗೂ ಸೂಚನೆ ನೀಡಲಾಗುವುದು ಎಂದ ಸಚಿವರು ಜಿಲ್ಲೆಯ ಆಡಳಿತವನ್ನು ಸರಿ ದಾರಿಗೆ ತರುವ ನಿಟ್ಟಿನಲ್ಲಿ ಚಾಟಿ ಬೀಸಲಾಗುವುದು ಎಂದು ತಿಳಿಸಿದರು.

ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಕೆಲಸ:

ಜಿಲ್ಲೆಯಲ್ಲಿರುವ ಖಾಸಗಿ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆಯ ಉಪನಿರ್ದೇಶಕರಾದ ರವಿಚಂದ್ರ ಅವರನ್ನು ನೇಮಿಸಲಾಗುವುದು ಕೈಗಾರಿಕೆಗಳಲ್ಲಿ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲದೆ ಇರುವುದರಿಂದ ಇಲಾಖೆಯ ಮೂಲಕ ಅರ್ಜಿಗಳನ್ನು ಸಲ್ಲಿಸಲು ಒಂದು ಕೌಂಟರ್ ತೆರೆಯಲಾಗುವುದು ಅದನ್ನು ಸಧ್ಯದಲ್ಲೇ ಏರ್ಪಾಡು ಮಾಡಲಾಗುವುದು ಎಂದು ಸಚಿವ ನಾಗೇಶ್ ಭರವಸೆ ನೀಡಿದರು.

ಕೆ.ಸಿ.ವ್ಯಾಲಿ ನೀರು ಗುರುತ್ವಾಕರ್ಷಣೆಗೆ ಅನುಗುಣವಾಗಿ ಕೆರೆಯಿಂದ ಕೆರೆಗೆ ಹರಿಯುತ್ತದೆ. ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ವೇಗವಾಗಿ ಕೆರೆಗಳು ತುಂಬುತ್ತಿವೆ. ಕೆ.ಸಿ. ವ್ಯಾಲಿ ಯೋಜನೆಯ ಎರಡನೇ ಹಂತದಲ್ಲಿ ಕೆರೆಗಳನ್ನು ತುಂಬಿಸಲು ಕೆರೆಗಳನ್ನು ಆಯ್ಕೆ ಮಾಡಲಾಗುತ್ತಿದೆ. ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಕೊಡಿಸಲು ಹಾಗೂ ಮಾಹಿತಿ ನೀಡಲು ಕೈಗಾರಿಕೆ ಇಲಾಖೆಯಲ್ಲಿ ಕೌಂಟರ್ ತೆಗೆಯಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರು ಖಾಲಿ ಇರುವೆಡೆ ತಾತ್ಕಾಲಿಕ ಉದ್ಯೋಗಗಳನ್ನು ಕೊಡಿಸುವಂತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಖಾಲಿ ಇರುವ ಹುದ್ದೆಯನ್ನು ನೀಡುವಂತೆ, ಕೋಲಾರ ನಗರಸಭೆಯ ವ್ಯಾಪ್ತಿಯಲ್ಲಿ ಒತ್ತುವರಿಗಳಾಗಿದ್ದು ಒತ್ತುವರಿ ತೆರವುಗೊಳಿಸುವಂತೆ ಮನವಿ ಸಲ್ಲಿಸಿದರು. ಸಾರ್ವಜನಿಕರ ಮನವಿಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಿ ಪರಿಹರಿಸುವುದಾಗಿ ಸಚಿವರು ತಿಳಿಸಿದರು.

ಚಿತ್ರ : ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ ಬುಧವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.


Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Hindusthan Samachar Kannada
Top