Dailyhunt Logo
  • Light mode
    Follow system
    Dark mode
    • Play Story
    • App Story

ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ನೋಂದಣಿಗೆ ಆಹ್ವಾನ

ಶಿವಮೊಗ್ಗ, 23 ಆಗಸ್ಟ್ (ಹಿ.ಸ.):

ಯಂಕರ್:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ 2026-27ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಆಯ್ಕೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಡೆಯಲಿರುವ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತ ಕ್ರೀಡಾಪಟುಗಳಿಂದ ಅರ್ಜಿ ಹಾಗೂ ನೋಂದಣಿಗೆ ಆಹ್ವಾನಿಸಲಾಗಿದೆ.

ಆಗಸ್ಟ್ 30ರಂದು ಸಾಗರದ ನೆಹರೂ ಮೈದಾನ ಮತ್ತು ಸೊರಬದ ತಾಲೂಕು ಕ್ರೀಡಾಂಗಣದಲ್ಲಿ, ಸೆಪ್ಟೆಂಬರ್ 1ರಂದು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ, ಸೆ.3ರಂದು ಶಿಕಾರಿಪುರದ ತಾಲೂಕು ಕ್ರೀಡಾಂಗಣದಲ್ಲಿ, ಸೆ.4ರಂದು ತೀರ್ಥಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಹಾಗೂ ಹೊಸನಗರದ ತಾಲೂಕು ಕ್ರೀಡಾಂಗಣದಲ್ಲಿ ಮತ್ತು ಸೆ.6ರಂದು ಭದ್ರಾವತಿಯ ವಿ.ವಿ.ಎಸ್.ಎಲ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದೆ.

ಅಥ್ಲೆಟಿಕ್ಸ್, ವಾಲಿಬಾಲ್, ಫುಟ್‌ಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್ ಹಾಗೂ ಯೋಗಾಸನ ಸ್ಪರ್ಧೆಗಳು ನಡೆಯಲಿವೆ. ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಮತ್ತು ಗುಂಪು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲಿವೆ.

ಕ್ರೀಡಾಪಟುಗಳು ಗರಿಷ್ಠ ಎರಡು ವೈಯಕ್ತಿಕ ಹಾಗೂ ಒಂದು ಗುಂಪು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಬಹುದು. ತಮ್ಮ ತಾಲೂಕಿನಲ್ಲಿ ಮಾತ್ರ ಸ್ಪರ್ಧಿಸಲು ಅವಕಾಶವಿದ್ದು, ಮೂಲ ಆಧಾರ್ ಕಾರ್ಡ್ ಹಾಜರುಪಡಿಸುವುದು ಕಡ್ಡಾಯವಾಗಿದೆ. ಬೇರೆ ತಾಲೂಕಿನ ಕ್ರೀಡಾಪಟುಗಳು ಆ ತಾಲೂಕಿನಲ್ಲಿ ಶಿಕ್ಷಣ ಪಡೆಯುತ್ತಿದ್ದಲ್ಲಿ ಮಾತ್ರ ಭಾಗವಹಿಸಬಹುದು.

ನಿಗದಿತ ದಿನದಂದು ಬೆಳಿಗ್ಗೆ 9.30ರೊಳಗೆ ಕ್ರೀಡಾಂಗಣಕ್ಕೆ ಆಗಮಿಸಿ ನೋಂದಣಿ ಮಾಡಿಕೊಳ್ಳಬೇಕು. ಮೊಬೈಲ್ ಆಪ್ ಅಥವಾ ಜಾಲತಾಣದ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಇಲಾಖೆ ಸೂಚಿಸಿದೆ.

ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ದೈಹಿಕ ಶಿಕ್ಷಣಾಧಿಕಾರಿಗಳು ಅಥವಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada