Dailyhunt Logo
  • Light mode
    Follow system
    Dark mode
    • Play Story
    • App Story
ತಳಕಲ್ ಗ್ರಾಮದಲ್ಲಿ ಒಂದು ದಿನದ ಕಾರ್ಯಾಗಾರ

ತಳಕಲ್ ಗ್ರಾಮದಲ್ಲಿ ಒಂದು ದಿನದ ಕಾರ್ಯಾಗಾರ

ಕೊಪ್ಪಳ, 02 ಜುಲೈ (ಹಿ.ಸ.):

ಯಂಕರ್ : ತೊಗರಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕುರಿತ ಒಂದು ದಿನದ ತಾಂತ್ರಿಕ ಕಾರ್ಯಾಗಾರವು ಇತ್ತೀಚೆಗೆ ಕುಕುನೂರು ಹೋಬಳಿಯ ತಳಕಲ್ ಗ್ರಾಮದಲ್ಲಿ ನಡೆಯಿತು.

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ವಿಸ್ತರಣಾ ಮುಂದಾಳು ಆದ ಡಾ. ಬದರಿ ಪ್ರಸಾದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭಾಗದಲ್ಲಿ ತೊಗರಿ ಬೆಳೆ ಇತ್ತೀಚೆಗೆ ಬೆಳೆಯಲಾಗುತ್ತಿದ್ದು, ಹೆಚ್ಚಿನ ತಾಂತ್ರಿಕತೆಗಾಗಿ ಕಲಬುರ್ಗಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.

ರಾಜು ತೆಗ್ಗೆಳ್ಳಿ ಮತ್ತು 30 ವರ್ಷಗಳಿಂದಲೂ ತೊಗರಿ ಬೆಳೆತಯನ್ನು ಬೆಳೆಯುತ್ತಾ ಅಪಾರ ಅನುಭವ ಹೊಂದಿದ ಮತ್ತು ಕೃಷಿಯಲ್ಲಿ ಅನೇಕ ಆವಿಷ್ಕಾರಗಳನ್ನು ಮಾಡಿದ ರಾಜ್ಯ ಪ್ರಶಸ್ತಿ ವಿಜೇತ ಕೃಷಿ ಪಂಡಿತ ಹಾಗೂ ರೈತ ವಿಜ್ಞಾನಿ ಶರಣಬಸಪ್ಪ ಪಾಟೀಲ ಅವರನ್ನು ಹೆಚ್ಚಿನ ಮಾಹಿತಿ ನೀಡಲು ಈ ಕಾರ್ಯಾಗಾರಕ್ಕೆ ಆಹ್ವಾನಿಸಲಾಗಿದೆ. ಈ ಭಾಗದ ರೈತರು ತೊಗರಿ ಬೆಳೆಯಲ್ಲಿ ಹೆಚ್ಚಿನ ತಾಂತ್ರಿಕತೆಯನ್ನು ತಿಳಿದುಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ತಿಮ್ಮಣ್ಣ ಚವಡಿ ಅವರು ಮಾತನಾಡಿ, ತೊಗರಿ ಬೆಳೆಯ ವಿಸ್ತೀರ್ಣ ಹೆಚ್ಚಾಗುತ್ತಿದ್ದು, ಪ್ರಸ್ತುತ ಮೆಕ್ಕೆ ಜೋಳ ಬದಲಾಗಿ ತೊಗರಿ ಬೇಸಾಯದತ್ತ ರೈತರು ಒಲವು ತೋರಿಸುತ್ತಿದ್ದಾರೆ ಹಾಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ವಿಸ್ತರಣಾ ನಿರ್ದೇಶನಾಲಯ ಸಹಕಾರದಿಂದ ಸುಮಾರು 100 ಕ್ವಿಂಟಾಲನಷ್ಟು ತೊಗರಿ ಬೀಜವನ್ನು ವಿತರಿಸಲಾಗಿದೆ. ರೈತರು ಈ ಕಾರ್ಯಾಗಾರದ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದರು.

ಕೊಪ್ಪಳ ಜಿಲ್ಲಾ ಹಾಪ್ಕಾಮ್ಸ್ ಸಂಸ್ಥೆಯ ಅಧ್ಯಕ್ಷರಾದ ಯಂಕಣ್ಣಾ ಯರಾಶಿ ಅವರು ಮಾತನಾಡಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವು ಇತ್ತೀಚೆಗೆ ಹೊಸ ಹೊಸ ತಾಂತ್ರಿಕತೆಗಳನ್ನು ರೈತರಿಗೆ ಪರಿಚಯಿಸುತ್ತಾ ಹೊಸ ಹೆಜ್ಜೆ ಇಟ್ಟಿದೆ ಇದೇ ರೀತಿ ರೈತರಿಗೆ ಸಹಕಾರ ಕೊಟ್ಟು ಇನ್ನೂ ಹೆಚ್ಚಿನ ತಾಂತ್ರಿಕ ಮಾಹಿತಿಯನ್ನು ರೈತರಿಗೆ ಒದಗಿಸಲು ಸಹಕರಿಸಬೇಕೆಂದು ತಿಳಿಸಿದರು.

ಕೃಷಿ ತಂತ್ರಜ್ಞರ ಸಂಸ್ಥೆಯ ರಾಜ್ಯ ಪ್ರತಿನಿಧಿ ವೀರಣ್ಣ ಕೆ. ಕಮತರ ಅವರು ಮಾತನಾಡಿ, ಸಂಸ್ಥೆಯು ಎಂದೆಂದಿಗೂ ರೈತರ ಪರವಾಗಿ ಚಟುವಟಿಕೆಗಳನ್ನು ನಡೆಸುತ್ತಿದೆ. ಇನ್ನೂ ಮುಂದೆಯೂ ಸಹ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಯೋಗದೊಂದಿಗೆ ಹಲವಾರು ತಾಂತ್ರಿಕತೆಗಳ ಪರಿಚಯ ಮಾಡಿಸುವ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ ಕೃಷ್ಣಮೂರ್ತಿ ಅವರು ಇಲಾಖೆಯ ವಿವಿಧ ಸವಲತ್ತುಗಳ ಕುರಿತು ರೈತರಿಗೆ ಮಾಹಿತಿ ನೀಡಿ, ಬೆಳೆ ವಿಮೆ ಕುರಿತು ರೈತರ ಪ್ರಶ್ನೆಗೆ ಸೂಕ್ತವಾಗಿ ಉತ್ತರಿಸಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ವಿಸ್ತರಣಾ ನಿರ್ದೇಶಕರಾದ ಡಾ. ಎ.ಆರ್. ಕುರುಬರ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ವಿನೂತನವಾಗಿ "ರೈತರೊಂದಿಗೆ ಒಂದು ದಿನ" ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಇನ್ನು ಮುಂದೆಯೂ ತಿಂಗಳಿಗೊಮ್ಮೆಯಾದರೂ ಇಂತಹ ಕಾರ್ಯಕ್ರಮಗಳನ್ನು ರೈತರ ಹೊಲದಲ್ಲಿಯೇ ಆಯೋಜಿಸಲಾಗುವುದು. ಈ ಕಾರ್ಯಾಗಾರವು ತೊಗರಿ ಬೆಳೆಗಾರರಿಗೆ ಪ್ರಸ್ತುತವಾಗಿ ಅತ್ಯಂತ ಪ್ರಮುಖವಾಗಿದ್ದು, ರೈತರು ಹೆಚ್ಚಿನ ತಾಂತ್ರಿಕತೆಗಳನ್ನು ತಿಳಿದುಕೊಳ್ಳಬೇಕೆಂದು ಕರೆ ನೀಡಿದರು.

ರಾಯಚೂರಿನ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತೀ ಎರಡನೇ ಮತ್ತು ನಾಲ್ಕನೇ ಶನಿವಾರದಂದು "ರೈತರ ಸಂತೆ" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರೈತರೇ ಖುದ್ದಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ. ಇಂತಹ ಕಾರ್ಯಕ್ರಮಗಳನ್ನು ಕೆ.ವಿ.ಕೆ. ಗಂಗಾವತಿ ಮತ್ತು ಕೃ.ವಿ.ಶಿ.ಕೇಂದ್ರ, ಕೊಪ್ಪಳದಲ್ಲಿಯೂ ಮುಂದಿನ ದಿನಮಾನಗಳಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಕಲಬುರ್ಗಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ರಾಜು ತೆಗ್ಗೆಳ್ಳಿ ಅವರು, ತೊಗರಿ ಬೇಸಾಯದ ಹಲವು ಆಯಾಮಗಳ ಕುರಿತು ರೈತರೊಂದಿಗೆ ತಾಂತ್ರಿಕ ಮಾಹಿತಿಯನ್ನು ನೀಡುವುದರೊಂದಿಗೆ ತೊಗರಿ ಬೆಳೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಅಲ್ಲದೇ ರೈತರ ಹಲವಾರು ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡಿದರು.

ಕಲಬುರ್ಗಿಯ ರೈತ ವಿಜ್ಞಾನಿಯಾದ ಶರಣಬಸಪ್ಪ ಪಾಟೀಲ ಅವರು ತಮ್ಮ ಹಲವಾರು ನೂತನ ಆವಿಷ್ಕಾರಗಳ ಬಗ್ಗೆ ತಿಳಿಸುತ್ತಾ, ವಿಶೇಷವಾಗಿ ತೊಗರಿ ಬೆಳೆಯಲ್ಲಿ ಕುಡಿ ಚಿವುಟುವ ಯಂತ್ರ ಹಾಗೂ ಇನ್ನಿತರ ಯಂತ್ರಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ. ರಾಘವೇಂದ್ರ ಯಲಿಗಾರ, ಕೃ.ವಿ.ಕೇಂ., ಗಂಗಾವತಿಯ ಬೇಸಾಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಲ್ಲೇಶ, ಗುಳದಳ್ಳಿಯ ಕ್ಷೇತ್ರ ಅಧೀಕ್ಷಕರಾದ ಡಾ. ಹನುಮಂತಪ್ಪ ದಾಸರ, ಕೊಪ್ಪಳ ಕೃಷಿ ತಂತ್ರಜ್ಞರ ಸಂಸ್ಥೆಯ ವಾಮನಮೂರ್ತಿ, ತಳಕಲ್ ಸಾವಯವ ಕೃಷಿಕರಾದ ಉದಯ ರಾಯರಡ್ಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹನುಮಂತಗೌಡ ಪಾಟೀಲ ಚಂಡೂರು, ಕೃಷಿಕರಾದ ಶ್ರೀಪಾದ ಮುರಡಿ, ಆನಂದ ಪ್ಯಾಟಿ, ಕಾಮನೂರು ಅಲ್ಲದೇ ತಳಕಲ್ ಗ್ರಾಮದ ಮತ್ತು ಸುತ್ತಮುತ್ತಲಿನ ಪ್ರಗತಿ ಪರ ರೈತರು ಮತ್ತು ರೈತ ಮಹಿಳೆಯರು 100 ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ವಿಜ್ಞಾನಿಗಳಾದ ವಿಸ್ತರಣಾ ಮುಂದಾಳು ಡಾ. ಬದರಿ ಪ್ರಸಾದ ಪಿ.ಆರ್. ಮೊ.ನಂ.: 9900145705, ಇವರನ್ನು ಸಂಪರ್ಕಿಸಬಹುದು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada