Dailyhunt Logo
  • Light mode
    Follow system
    Dark mode
    • Play Story
    • App Story
ಟ್ರಂಪ್ ಇರಾನ್ ಯುದ್ಧಾಧಿಕಾರಕ್ಕೆ ಅಮೆರಿಕ ಪ್ರತಿನಿಧಿ ಸಭೆ ಕಡಿವಾಣ

ಟ್ರಂಪ್ ಇರಾನ್ ಯುದ್ಧಾಧಿಕಾರಕ್ಕೆ ಅಮೆರಿಕ ಪ್ರತಿನಿಧಿ ಸಭೆ ಕಡಿವಾಣ

ವಾಷಿಂಗ್ಟನ್, 04 ಜೂನ್ (ಹಿ.ಸ.) :

ಯಂಕರ್ : ಅಮೆರಿಕದ ಕಾಂಗ್ರೆಸ್ನ ಕೆಳಸದನವಾದ ಪ್ರತಿನಿಧಿ ಸಭೆಯು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇರಾನ್ ವಿರುದ್ಧದ ಯುದ್ಧಾಧಿಕಾರವನ್ನು ಮಿತಿಗೊಳಿಸುವ ಮಹತ್ವದ ನಿರ್ಣಯವನ್ನು ಬುಧವಾರ 215-208 ಮತಗಳ ಅಂತರದಲ್ಲಿ ಅಂಗೀಕರಿಸಿದೆ.

ಈ ಮೂಲಕ ಅಧ್ಯಕ್ಷರು ಕಾಂಗ್ರೆಸ್ ಅನುಮತಿಯಿಲ್ಲದೆ ಇರಾನ್ ವಿರುದ್ಧ ಸೇನಾ ಕ್ರಮ ಕೈಗೊಳ್ಳುವುದಕ್ಕೆ ತಡೆಯೊಡ್ಡುವ ಪ್ರಯತ್ನ ನಡೆದಿದೆ.

ಡೆಮಾಕ್ರಾಟ್ ಪಕ್ಷದ ನೇತೃತ್ವದಲ್ಲಿ ಮಂಡಿಸಲಾದ ಈ ನಿರ್ಣಯಕ್ಕೆ ನಾಲ್ವರು ರಿಪಬ್ಲಿಕನ್ ಸದಸ್ಯರು ಸಹ ಬೆಂಬಲ ಸೂಚಿಸಿದರು. ಓಹಿಯೋದ ವಾರನ್ ಡೇವಿಡ್ಸನ್, ಪೆನ್ಸಿಲ್ವೇನಿಯಾದ ಬ್ರಿಯಾನ್ ಫಿಟ್ಜ್ಪ್ಯಾಟ್ರಿಕ್, ಮಿಶಿಗನ್ನ ಟಾಮ್ ಬ್ಯಾರೆಟ್ ಹಾಗೂ ಕೆಂಟಕಿಯ ಥಾಮಸ್ ಮ್ಯಾಸಿ ಅವರು ನಿರ್ಣಯದ ಪರವಾಗಿ ಮತ ಚಲಾಯಿಸಿದರು.

ನಿರ್ಣಯದ ಪ್ರಕಾರ, ಅಮೆರಿಕ ಕಾಂಗ್ರೆಸ್ ಅಧಿಕೃತವಾಗಿ ಯುದ್ಧ ಘೋಷಣೆ ಮಾಡುವವರೆಗೆ ಅಥವಾ ಸೇನಾ ಬಲ ಬಳಕೆಗೆ ಅನುಮತಿ ನೀಡುವ ಕಾನೂನು ಜಾರಿಯಾಗುವವರೆಗೆ, ಅಧ್ಯಕ್ಷ ಟ್ರಂಪ್ ಅವರು ಇರಾನ್, ಅದರ ಸೇನೆ ಅಥವಾ ಸರ್ಕಾರದ ಯಾವುದೇ ಅಂಗದ ವಿರುದ್ಧ ಅಮೆರಿಕದ ಸಶಸ್ತ್ರ ಪಡೆಗಳನ್ನು ಬಳಸಬಾರದು ಎಂದು ಸೂಚಿಸಲಾಗಿದೆ.

ಪ್ರತಿನಿಧಿ ಸಭೆಯಲ್ಲಿ ಅಂಗೀಕಾರಗೊಂಡಿರುವ ಈ ನಿರ್ಣಯವನ್ನು ಇದೀಗ ಅಮೆರಿಕದ ಮೇಲ್ಮನೆ ಸೆನೆಟ್ ಗೆ ಕಳುಹಿಸಲಾಗುತ್ತದೆ. ಸೆನೆಟ್ ಕೂಡ ಇದನ್ನು ಬೆಂಬಲಿಸಿದರೂ, ಇದು ಕಾನೂನಿನ ಸ್ವರೂಪ ಹೊಂದಿರುವ ಮಸೂದೆಯಲ್ಲದ ಕಾರಣ ಅಧ್ಯಕ್ಷರ ಸಹಿಗೆ ಕಳುಹಿಸುವ ಅಗತ್ಯವಿಲ್ಲ. ಹಾಗೆಯೇ ಇದರ ಮೇಲೆ ಅಧ್ಯಕ್ಷರಿಗೆ ವೀಟೋ ಚಲಾಯಿಸುವ ಅಧಿಕಾರವೂ ಇರುವುದಿಲ್ಲ.

ಮತದಾನದ ನಂತರ ವಿದೇಶಾಂಗ ವ್ಯವಹಾರಗಳ ಸಮಿತಿಯ ಹಿರಿಯ ಡೆಮಾಕ್ರಾಟ್ ಸದಸ್ಯ ಗ್ರೆಗೊರಿ ಮೀಕ್ಸ್ ಮಾತನಾಡಿ, "ಇಂದು ಕಾಂಗ್ರೆಸ್ ಸಂವಿಧಾನದ ಆಶಯವನ್ನು ಎತ್ತಿ ಹಿಡಿದಿದೆ. ಡೆಮಾಕ್ರಾಟ್ ಹಾಗೂ ರಿಪಬ್ಲಿಕನ್ ಸದಸ್ಯರು ಸೇರಿ ಈ ಯುದ್ಧ ಸಾಕಾಗಿದೆ ಎಂದು ಹೇಳಿದ್ದಾರೆ. ಅಮೆರಿಕ ಈ ಸಂಘರ್ಷದಲ್ಲಿ ಏಕೆ ಭಾಗಿಯಾಗಿದೆ ಎಂಬುದನ್ನು ಜನರಿಗೆ ತಿಳಿಸುವ ಸಮಯ ಬಂದಿದೆ" ಎಂದು ಹೇಳಿದರು.

ಇರಾನ್ ಸಂಬಂಧಿತ ಯುದ್ಧಾಧಿಕಾರದ ವಿಷಯವಾಗಿ ಪ್ರತಿನಿಧಿ ಸಭೆಯಲ್ಲಿ ಮತದಾನ ನಡೆದಿರುವುದು ಇದು ನಾಲ್ಕನೇ ಬಾರಿ. ಮತದಾನಕ್ಕೂ ಮುನ್ನ ಸಭಾಧ್ಯಕ್ಷ ಮೈಕ್ ಜಾನ್ಸನ್ ಮಾತನಾಡಿ, "ಈ ಸಂದರ್ಭದಲ್ಲಿ ಆಡಳಿತ ಮತ್ತು ಸೇನಾ ಮುಖ್ಯಸ್ಥರಾಗಿರುವ ಅಧ್ಯಕ್ಷರಿಂದ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕಸಿದುಕೊಳ್ಳುವುದು ಅತ್ಯಂತ ಅಪಾಯಕಾರಿ ಹೆಜ್ಜೆಯಾಗಬಹುದು" ಎಂದು ಅಭಿಪ್ರಾಯಪಟ್ಟರು.

ಇನ್ನೊಂದೆಡೆ ಶ್ವೇತಭವನದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಆರು ರಿಪಬ್ಲಿಕನ್ ಸದಸ್ಯರ ಗೈರುಹಾಜರಿಯೇ ಈ ನಿರ್ಣಯ ಅಂಗೀಕಾರವಾಗಲು ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

"ಅಧ್ಯಕ್ಷ ಟ್ರಂಪ್ ಅವರು ರಾಷ್ಟ್ರದ ಭದ್ರತೆಯನ್ನು ಕಾಪಾಡಲು ತಮ್ಮ ಸಾಂವಿಧಾನಿಕ ಅಧಿಕಾರಗಳನ್ನು ಬಳಸುವುದನ್ನು ಮುಂದುವರಿಸಲಿದ್ದಾರೆ. ಜೊತೆಗೆ ಕಾಂಗ್ರೆಸ್ಗೆ ಅಗತ್ಯವಾದ ಎಲ್ಲಾ ಮಾಹಿತಿಯನ್ನು ಪಾರದರ್ಶಕವಾಗಿ ನೀಡಲಿದ್ದಾರೆ" ಎಂದು ಅವರು ತಿಳಿಸಿದರು.

ಅಮೆರಿಕದ ಆಡಳಿತ ಮತ್ತು ಕಾಂಗ್ರೆಸ್ ನಡುವಿನ ಅಧಿಕಾರ ಹಂಚಿಕೆ ಕುರಿತ ಚರ್ಚೆಯನ್ನು ಈ ನಿರ್ಣಯ ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದು, ಇರಾನ್ ಸಂಘರ್ಷದ ಮುಂದಿನ ಬೆಳವಣಿಗೆಗಳ ಮೇಲೆ ಜಾಗತಿಕ ಗಮನ ಕೇಂದ್ರೀಕೃತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada