ಬಳ್ಳಾರಿ, ಜೂ. 21(ಹಿ.ಸ): ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಉತ್ತಮವಾಗಿರುವ ಕಾರಣ ಜಲಾಶಯದಿಂದ ಎಚ್‌ಎಲ್‌ಸಿ ಮತ್ತು ಎಲ್‌ಎಲ್‌ಸಿ ಕಾಲುವೆಗೆ ಜುಲೈ 10 ರಿಂದ ನೀರು ಬಿಡಲು ಕೋರಿ ತುಂಗಭದ್ರ ರೈತ ಸಂಘ ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದೆ.
ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರಿಗೆ ಮನವಿ ಸಲ್ಲಿಸಿದ ಸಂಘದ ಸದಸ್ಯರು, ಬೆಳೆಗಳಿಗೆ ನೀರು ಬೇಗನೆ ಬಿಡುವುದರಿಂದ ಎರಡನೇ ಬೆಳೆಗೆ ನೀರು ಪೂರೈಸುವಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಕಾರಣ ತುಂಗಭದ್ರ ಜಲಾಶಯದಿಂದ ಎಲ್‌ಎಲ್‌ಸಿ (ತುಂಗಭದ್ರ ಬಲದಂಡ ಕೆಲಮಟ್ಟದ ಕಾಲುವೆ) ಎಲ್‌ಬಿಎಂಸಿ (ತುಂಗಭದ್ರ ಎಡದಂಡೆಯ ಕಾಲುವೆ) ಕಾಲುವೆಗಳಿಗೆ ಜುಲೈ-10 ರಿಂದ ನೀರು ಹೊರ ಹರಿದುಬಿಡಬೇಕು ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಅವರು ಮಾತನಾಡಿ,
ತುಂಗಭದ್ರ ಜಲಾಶಯವು ಬಳ್ಳಾರಿ-ವಿಜಯನಗರ ; ಕೊಪ್ಪಳ-ರಾಯಚೂರು ಜಿಲ್ಲೆಗಳ ರೈತರ ಜೀವನಾಡಿ. ಭತ್ತ, ಹತ್ತಿ, ಮೆಣಸಿನಕಾಯಿ ಹಾಗೂ ನೀರಾವರಿ ಬೆಳೆಗಳನ್ನು ಈ ಜಲಾಶಯದ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತದೆ.
ತುಂಗಭದ್ರ ಜಲಾಶಯಕ್ಕೆ ಕಳೆದ 3 ದಿನಗಳಿಂದ ಉತ್ತಮವಾದ ಒಳಹರಿವು ಇದೆ. ಜಲಾಶಯವು ಶೀಘ್ರದಲ್ಲ ಭರ್ತಿ ಆಗುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.

