ಬಳ್ಳಾರಿ, 02 ಜುಲೈ (ಹಿ.ಸ.)
ಆಯಂಕರ್ : ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಚಲ್ಲಾಪಿಲ್ಲಿಯಾಗಿ ಕಣ್ಮರೆಯಾಗುತ್ತಿದ್ದ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸುವ ಮೂಲಕ ಜನತೆಗೆ ವಚನಗಳ ಬೆಳಕನ್ನು ನೀಡಿದ 'ವಚನ ಪಿತಾಮಹ' ಡಾ.
ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ ಕೊಡುಗೆ ಅಪಾರ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧರಾಮ ಕಲ್ಮಠ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಚಯದಲ್ಲಿ ಗುರುವಾರ ನಡೆದ `ಡಾ.ಫ.ಗು. ಹಳಕಟ್ಟಿ ಅವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ'ಯಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.
12 ನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪದಲ್ಲಿ ದೊಡ್ಡ ಪ್ರಮಾಣದಲ್ಲಿ ವಚನ ಸಾಹಿತ್ಯವನ್ನು ಸೃಷ್ಟಿಸಿದ್ದರು. ಆದರೆ ಕಲ್ಯಾಣ ಕ್ರಾಂತಿಯ ನಂತರ, ಶರಣರನ್ನು ಹಿಮ್ಮೆಟ್ಟಿಸುವ ಹಾಗೂ ವಚನಗಳನ್ನು ನಾಶಮಾಡುವ ಸಂಚು ನಡೆದಾಗ ವಚನಗಳನ್ನು ರಕ್ಷಿಸುವ ಕಾರ್ಯವನ್ನು ಫ. ಗು. ಹಳಕಟ್ಟಿಯವರು ಕೈಗೆತ್ತಿಕೊಂಡಿದ್ದವರು ಎಂದು ತಿಳಿಸಿದರು.
19 ನೇ ಶತಮಾನದ ಆರಂಭದಲ್ಲಿ ಕೇವಲ 25 ವಚನಕಾರರ ಬೆರಳೆಣಿಕೆಯಷ್ಟು ವಚನಗಳು ಮಾತ್ರ ಬೆಳಕಿನಲ್ಲಿದ್ದವು. ಅಂತಹ ಸಂದರ್ಭದಲ್ಲಿ ಹಳಕಟ್ಟಿಯವರು ಸುಮಾರು 22,000 ವಚನಗಳನ್ನು ದೇಶದ ಮೂಲೆ ಮೂಲೆಗಳಿಂದ ಸಂಗ್ರಹಿಸಿದರು ಎಂದರು.
1880 ರಲ್ಲಿ ಧಾರವಾಡದಲ್ಲಿ ಜನಿಸಿದ ಹಳಕಟ್ಟಿಯವರ ಮೂಲ ಊರು ಬೆಳಗಾವಿ ಜಿಲ್ಲೆಯ ಪರಸಗಡ ಹತ್ತಿರದ ಹಳಕಟ್ಟಿ. ಇವರ ತಂದೆ ಗುರುಬಸಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಉತ್ತಮ ಲೇಖಕರು. ತಂದೆಯವರ ಬರಹ ಪ್ರೀತಿ ಹಳಕಟ್ಟಿಯವರಿಗೆ ಬಾಲ್ಯದಲ್ಲೇ ದೊರೆತಿತ್ತು. ಮೂರನೇ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಇವರನ್ನು ಅಜ್ಜಿ ಬಸ್ಸಮ್ಮ ಸಾಕಿ ಬೆಳೆಸಿದರು ಎಂದರು.
ಧಾರವಾಡದಲ್ಲಿ ಪ್ಲೇಗ್ ರೋಗ ಹರಡಿದಾಗ ಹೆಂಡತಿಯ ಊರಾದ ಬನಹಟ್ಟಿಗೆ ತೆರಳಿದ್ದ ಸಂದರ್ಭದಲ್ಲಿ ಮಾವನವರು ನೀಡಿದ 'ಷಟಸ್ಥಲ' ಮತ್ತು 'ಪ್ರಭುದೇವರ ವಚನಗಳು' ಎಂಬ ತಾಡೋಲೆ ಪುಸ್ತಕಗಳು ಹಳಕಟ್ಟಿಯವರ ಜೀವನದ ದಿಕ್ಕನ್ನೇ ಬದಲಿಸಿದವು. ವಚನಗಳ ಮಹತ್ವವನ್ನು ಅರಿತ ಅವರು, ತಮ್ಮ ಇಡೀ ಜೀವನವನ್ನು ವಚನ ಸಾಹಿತ್ಯಕ್ಕಾಗಿ ಮುಡಿಪಾಗಿಡಲು ಸಂಕಲ್ಪಿಸಿದವರು ಎಂದು ತಿಳಿಸಿದರು.
ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಆಲಂಭಾಷಾ ಅವರು ಮುಖ್ಯ ಅತಿಥಿಗಳಾಗಿ, ವಚನ ಎನ್ನುವ ಮೂರಕ್ಷರದ ಪದದ ಹಿನ್ನೆಲೆಯನ್ನು ವಿವರಿಸಿದ ಅವರು, ವಚನ ಎಂದರೆ ಕೇವಲ ಸಾಲುಗಳಲ್ಲ; 'ವ' ಎಂದರೆ ವಚಿಸುವುದು ಅಂದರೆ ಕೇಳಲು ಇಷ್ಟವಾಗುವುದು, 'ಚ' ಎಂದರೆ ಚಲಿಸುವುದು ಅಂದರೆ 12ನೇ ಶತಮಾನದಿಂದ ಹಿಡಿದು 21ನೇ ಶತಮಾನದವರೆಗೂ ನಿರಂತರವಾಗಿ ಸಾಗಿಬಂದಿರುವುದು, ಮತ್ತು 'ನ' ಎಂದರೆ ನಯನಿಸುವುದು ಅಂದರೆ ಕಣ್ಣಿಗೆ ಸುಂದರವಾಗಿ ಕಾಣುವುದು ಎಂದು ಅರ್ಥೈಸಿದರು.
ಬಳ್ಳಾರಿ ತಾಲ್ಲೂಕು ಗ್ರೇಡ್-2 ತಹಶೀಲ್ದಾರ ವಿನಾಯಕ ಗೋಡ್ಬಾಳೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳ್ಳಾರಿಯ ಎಂ. ನಾಗಭೂಷಣ ಬಾಪುರೆ ತಂಡ ವಚನ ಸಂಗೀತ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಲಾಯಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

