Dailyhunt Logo
  • Light mode
    Follow system
    Dark mode
    • Play Story
    • App Story
ವಿಜಯಪುರ ಕೆಕೆಆರ್ಟಿಸಿ ವಿಭಾಗದ ನೂತನ ನಿಯಂತ್ರಣಾಧಿಕಾರಿಯಾಗಿ ಡಿ.ಎ. ಬಿರಾದಾರ ಅಧಿಕಾರ ಸ್ವೀಕಾರ

ವಿಜಯಪುರ ಕೆಕೆಆರ್ಟಿಸಿ ವಿಭಾಗದ ನೂತನ ನಿಯಂತ್ರಣಾಧಿಕಾರಿಯಾಗಿ ಡಿ.ಎ. ಬಿರಾದಾರ ಅಧಿಕಾರ ಸ್ವೀಕಾರ

ವಿಜಯಪುರ, 01 ಜೂನ್ (ಹಿ.ಸ.) :

ಆಂಕರ್ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್ಟಿಸಿ) ವಿಜಯಪುರ ವಿಭಾಗದ ನೂತನ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದವರಾದ ಡಿ.ಎ. ಬಿರಾದಾರ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ಅನುಭವಸಂಪನ್ನ ಹಾಗೂ ಜನಸ್ನೇಹಿ ಅಧಿಕಾರಿಯಾಗಿ ಹೆಸರುವಾಸಿಯಾಗಿರುವ ಬಿರಾದಾರ ಅವರ ನೇಮಕಾತಿಯಿಂದ ಜಿಲ್ಲೆಯ ಸಾರಿಗೆ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಮತ್ತು ಸುಧಾರಣೆಯ ನಿರೀಕ್ಷೆಗಳು ಮೂಡಿವೆ.

ಡಿ.ಎ. ಬಿರಾದಾರ ಅವರು ಸಾರಿಗೆ ಇಲಾಖೆಯಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಅಪಾರ ಅನುಭವ ಗಳಿಸಿದ್ದಾರೆ. ಈ ಹಿಂದೆ ವಿಜಯಪುರ ವಿಭಾಗದಲ್ಲಿ ಜಿಲ್ಲಾ ಸಾರಿಗೆ ಅಧಿಕಾರಿ (ಡಿಟಿಒ) ಆಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳ ಜನರ ಸಾರಿಗೆ ಸಮಸ್ಯೆಗಳನ್ನು ಸಮೀಪದಿಂದ ಅರಿತು, ಅನೇಕ ಹಳ್ಳಿಗಳಿಗೆ ಹೊಸ ಬಸ್ ಮಾರ್ಗಗಳನ್ನು ಕಲ್ಪಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು.

ವಿಶೇಷವಾಗಿ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಹಲವು ಸಾರಿಗೆ ಸೇವೆಗಳನ್ನು ಆರಂಭಿಸಲು ಮುಂದಾಗಿದ್ದ ಅವರು, ಸಾರ್ವಜನಿಕರೊಂದಿಗೆ ಸ್ನೇಹಪರವಾಗಿ ವರ್ತಿಸುವ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಸಾರಿಗೆ ಇಲಾಖೆಯ ಸಿಬ್ಬಂದಿ ಹಾಗೂ ನೌಕರರ ಸಮಸ್ಯೆಗಳಿಗೂ ಸ್ಪಂದಿಸಿ, ಆಡಳಿತಾತ್ಮಕವಾಗಿ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡು ಉತ್ತಮ ಸೇವೆ ಸಲ್ಲಿಸಿದ್ದರು.

ನೂತನ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಲ್ಲಿ ಸಂತಸ ವ್ಯಕ್ತವಾಗಿದ್ದು, ಗ್ರಾಮೀಣ ಭಾಗಗಳಿಗೆ ಇನ್ನಷ್ಟು ಬಸ್ ಸಂಪರ್ಕ ಕಲ್ಪಿಸುವುದು, ಈಗಿರುವ ಸೇವೆಗಳನ್ನು ವಿಸ್ತರಿಸುವುದು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡುವರೆಂಬ ವಿಶ್ವಾಸ ವ್ಯಕ್ತವಾಗಿದೆ.

ಡಿ.ಎ. ಬಿರಾದಾರ ಅವರ ಅಧಿಕಾರ ಸ್ವೀಕಾರದ ಹಿನ್ನೆಲೆಯಲ್ಲಿ ದೇವರ ಹಿಪ್ಪರಗಿ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಗಣ್ಯರು ಶುಭಾಶಯ ಕೋರಿದ್ದಾರೆ. ಶ್ರೀ ಅಯ್ಯಪ್ಪ ಸ್ವಾಮಿಗಳು ಹಿರೇಮಠ, ತಾಲೂಕು ಕಾನಿಪ ಅಧ್ಯಕ್ಷ ಸಂಗಮೇಶ ಉತ್ನಾಳ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರಹಮಾನ ಕನಕಾಲ, ಸುಭಾಷ ಹೊಸಟ್ಟಿ, ಗುರುರಾಜ ಆಕಳವಾಡಿ, ಗುರುನಾಥ ಮುರಡಿ, ಸೋಮಶೇಖರ ನಾಟಿಕಾರ, ಸೋಮು ಬಾವಿಮನಿ, ಶಿವರಾಜ ತಳವಾರ, ಅಯ್ಯಪ್ಪ ಸಾತಿಹಾಳ ಸೇರಿದಂತೆ ಹಲವಾರು ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅವರನ್ನು ಭೇಟಿ ಮಾಡಿ ಅಭಿನಂದಿಸಿದ್ದಾರೆ.

ಇದೇ ವೇಳೆ ಸಾರಿಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಸಹ ಬಿರಾದಾರ ಅವರಿಗೆ ಶುಭ ಹಾರೈಸಿದ್ದು, ಅವರ ಆಡಳಿತಾವಧಿಯಲ್ಲಿ ವಿಜಯಪುರ ಜಿಲ್ಲೆಯ ಸಾರಿಗೆ ಸೇವೆಗಳು ಇನ್ನಷ್ಟು ಜನಪರ ಹಾಗೂ ಪರಿಣಾಮಕಾರಿಯಾಗಲಿವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದ ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಮೂಲಕ ಜಿಲ್ಲೆಯ ಸಾರಿಗೆ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada