Dailyhunt Logo
  • Light mode
    Follow system
    Dark mode
    • Play Story
    • App Story
ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ತ್ವರಿತ ಕ್ರಮಕ್ಕೆ ಆಗ್ರಹ ; ಜಿಲ್ಲಾಧಿಕಾರಿಗಳಿಗೆ ಹೋರಾಟ ಸಮಿತಿ ಮನವಿ

ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ತ್ವರಿತ ಕ್ರಮಕ್ಕೆ ಆಗ್ರಹ ; ಜಿಲ್ಲಾಧಿಕಾರಿಗಳಿಗೆ ಹೋರಾಟ ಸಮಿತಿ ಮನವಿ

ವಿಜಯಪುರ, 03 ಜೂನ್ (ಹಿ.ಸ.) :

ಆಂಕರ್ : ವಿಜಯಪುರ ಜಿಲ್ಲೆಯ ಜನತೆಯ ಬಹುಕಾಲದ ಕನಸಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಆಡಳಿತ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ ನೀಡಿರುವ ಭರವಸೆಗಳನ್ನು ಕೂಡಲೇ ಈಡೇರಿಸಬೇಕು ಹಾಗೂ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕುರಿತ ಮಾಹಿತಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.

ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆಗಾಗಿ ಜಿಲ್ಲೆಯ ಇತಿಹಾಸದಲ್ಲೇ ಅಪರೂಪದ 116 ದಿನಗಳ ನಿರಂತರ ಹೋರಾಟ ನಡೆದಿರುವುದನ್ನು ಸಮಿತಿ ನೆನಪಿಸಿದೆ. ರಾಜಕೀಯ ಪಕ್ಷಗಳ ಭೇದಾಭೇದಗಳನ್ನು ಮರೆತು, ಪಕ್ಷಾತೀತ ಹಾಗೂ ಜಾತ್ಯತೀತವಾಗಿ ನಡೆದ ಈ ಹೋರಾಟಕ್ಕೆ ಜಿಲ್ಲೆಯ ವಿವಿಧ ಸಂಘಟನೆಗಳು, ರೈತರು, ಮಹಿಳಾ ಸಂಘಗಳು, ವಿಕಲಚೇತನರ ಸಂಘಟನೆಗಳು, ವಿದ್ಯಾರ್ಥಿಗಳು ಹಾಗೂ ಜನಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿದ್ದರು ಎಂದು ವಿವರಿಸಲಾಗಿದೆ.

ಹೋರಾಟದ ವೇಳೆ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 27 ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಆರು ಜನರನ್ನು 14 ದಿನಗಳ ಕಾಲ ಜೈಲಿಗೆ ಕಳುಹಿಸಿದ್ದ ಘಟನೆ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಹೋರಾಟ ಮತ್ತಷ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಜನವರಿ 9ರಂದು ವಿಜಯಪುರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರು.

ಅದರ ನಂತರ 2026-27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಡಿಪಿಆರ್ ಸಿದ್ಧಪಡಿಸುವುದಾಗಿ ಘೋಷಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಕೂಡ ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದ್ದರು. ಡಿಪಿಆರ್ ಸಿದ್ಧಪಡಿಸಲು ಸಮಿತಿ ರಚನೆಯಾಗಿದೆ ಎಂಬ ಸುದ್ದಿಯೂ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಆದರೆ ಇಷ್ಟೆಲ್ಲ ಘೋಷಣೆಗಳ ಬಳಿಕವೂ ಡಿಪಿಆರ್ ಸಿದ್ಧಗೊಂಡಿದೆಯೇ, ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆಯೇ ಅಥವಾ ಯಾವ ಹಂತದಲ್ಲಿದೆ ಎಂಬ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಇದರಿಂದ ಜನರಲ್ಲಿ ಗೊಂದಲ ಉಂಟಾಗಿದ್ದು, ಸರ್ಕಾರದ ಘೋಷಣೆಗಳು ಕೇವಲ ಭರವಸೆಯಾಗಿಯೇ ಉಳಿಯುವ ಆತಂಕ ವ್ಯಕ್ತವಾಗುತ್ತಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿರುವ ಅನುಮೋದಿತ ಡಿಪಿಆರ್ ಪ್ರತಿಯನ್ನು ಹೋರಾಟ ಸಮಿತಿಗೆ ನೀಡಬೇಕು ಹಾಗೂ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ಆಡಳಿತಾತ್ಮಕ ಮತ್ತು ಆರ್ಥಿಕ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿಯ ಸದಸ್ಯ ಬಿ. ಭಗವಾನ್ ರೆಡ್ಡಿ ಅವರು, "ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕಿತ್ತು. ಆದರೆ ಇದುವರೆಗೆ ಅದರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ. ಡಿಪಿಆರ್ ಸಿದ್ಧಗೊಂಡಿದ್ದರೆ ಅದರ ಪ್ರತಿಯನ್ನು ಹೋರಾಟ ಸಮಿತಿಗೆ ನೀಡಬೇಕು.

ಜಿಲ್ಲಾಧಿಕಾರಿಗಳು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದು ಹೇಳಿದರು.

ಹಿರಿಯ ರೈತ ಹೋರಾಟಗಾರ ಹಾಗೂ ಸಮಿತಿಯ ಸದಸ್ಯ ಅರವಿಂದ್ ಕುಲಕರ್ಣಿ ಮಾತನಾಡಿ, "116 ದಿನಗಳ ಹೋರಾಟದ ನಂತರ ಮುಖ್ಯಮಂತ್ರಿಗಳು ಪಿಪಿಪಿ ಮಾದರಿಯನ್ನು ರದ್ದುಪಡಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಘೋಷಿಸಿದ್ದರು. ಅವರ ಭರವಸೆಯನ್ನು ನಂಬಿ ನಾವು ಹೋರಾಟವನ್ನು ಹಿಂಪಡೆದಿದ್ದೇವೆ. ಆದರೆ ಬಜೆಟ್ ಘೋಷಣೆಯ ಬಳಿಕವೂ ಪ್ರಗತಿಯ ಕುರಿತು ಸ್ಪಷ್ಟತೆ ಇಲ್ಲ. ಆದ್ದರಿಂದ ವಿಳಂಬ ಮಾಡದೆ ಡಿಪಿಆರ್ ಪೂರ್ಣಗೊಳಿಸಿ, ಅಗತ್ಯ ಅನುದಾನ ಬಿಡುಗಡೆ ಮಾಡಿ ಶೀಘ್ರದಲ್ಲೇ ವೈದ್ಯಕೀಯ ಕಾಲೇಜು ಆರಂಭಿಸಬೇಕು" ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸದಸ್ಯರಾದ ಅನಿಲ್ ಹೊಸಮನಿ, ಚಂದ್ರಶೇಖರ ಲೆಂಡಿ, ಅಕ್ರಮ ಮಾಶಾಲ್ಕರ್, ಸುರೇಶ್ ಜೀಬಿ, ಮಲ್ಲಿಕಾರ್ಜುನ ಹಂದ್ರಾಳ, ಲಲಿತಾ ಬಿಜ್ಜರಗಿ, ಬಾಬುರಾವ್ ಬೀರಕಬ್ಬಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್.ಟಿ., ಶಿವಬಾಳಮ್ಮ ಕೊಂಡಗೂಳಿ, ಜಗದೇವ ಸೂರ್ಯವಂಶಿ, ಲಾಯಪ್ಪ ಇಂಗಳೆ, ಡಾ. ಗುರಿಕಾರ, ಭೀಮು ಉಪ್ಪಾರ, ಸಿದ್ರಾಮ ಹಿರೇಮಠ, ಭೋಗೇಶ ಸೋಲಾಪುರ, ಬಾಳು ಜೇವೂರ, ನೀಲಾಂಬಿಕಾ ಬಿರಾದಾರ, ಶ್ರೀನಾಥ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada