ಬಳ್ಳಾರಿ, 05 ಆಗಸ್ಟ್ (ಹಿ.ಸ.)
ಆಯಂಕರ್ : ವ್ಯಕ್ತಿಯ ಗುಣ, ನಡತೆ ಹಾಗೂ ಸಮಾಜಮುಖಿ ಬದ್ಧತೆಯ ಆಧಾರದ ಮೇಲೆ ವ್ಯಕ್ತಿತ್ವವು ರೂಪುಗೊಳ್ಳುತ್ತದೆ ಎಂದು ಗದಗ-ವಿಜಯಪುರದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದ್ದಾರೆ.
ಡಾ. ರಾಜಕುಮಾರ್ ರಸ್ತೆಯಲ್ಲಿಯ `ಪಾಂಚಜನ್ಯ' ಸಭಾಂಗಣದಲ್ಲಿ ನಡೆದ ವಿವೇಕಮಂಟಪ-ಉಪನ್ಯಾಸ ಮಾಲಿಕೆಯಲ್ಲಿ ಸ್ವಾಮಿ ವಿವೇಕಾನಂದರ ಲೀಲಾಮೃತ ಕುರಿತು ಉಪನ್ಯಾಸ ನೀಡಿದರು.
ಸಂಕುಚಿತ ಮನೋಭಾವದಿಂದ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಭಾರತೀಯರೆಂಬ ವಿಶಾಲ ಭಾವನೆಯು ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ದೇಶದ ಪ್ರತಿಯೊಬ್ಬ ನಾಗರಿಕನನ್ನು ಸಮಾನದೃಷ್ಟಿಯಿಂದ ಕಾಣುವ ಮನೋಭಾವ ಬೆಳೆಯಬೇಕು ಎಂದರು.
ಸ್ವಾಮಿ ವಿವೇಕಾನಂದರು ಮನಸ್ಸು ಮಾಡಿದರೆ ಅಮೆರಿಕಾದ ಚಿಕಾಗೋ ನಗರವನ್ನೇ ಹಿಂದೂ ಧರ್ಮಕ್ಕೆ ಮತಾಂತರ ಮಾಡಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಮತಾಂತರ ಯೋಚನೆ ಎಂದಿಗೂ ಸ್ವಾಮಿ ವಿವೇಕಾನಂದರಲ್ಲಿ ಸುಳಿಯಲಿಲ್ಲ. ಸರ್ವಧರ್ಮದ ಸಹಿಷ್ಣತೆಯನ್ನು ಅವರು ಪ್ರತಿಪಾದಿಸುತ್ತಲೇ ಬಂದರು ಎಂದರು.
ವಿವೇಕಮಂಟಪದ ಮುಖ್ಯಸ್ಥ ಪ್ರಭುದೇವ ಕಪ್ಪಗಲ್ಲು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಆರು ತಿಂಗಳಿನಿಂದ ಪ್ರತಿ ತಿಂಗಳು ಮೊದಲ ಭಾನುವಾರ ಬಳ್ಳಾರಿಗೆ ಆಗಮಿಸಿ ವಿವೇಕ ಲೀಲಾಮೃತ ಕುರಿತು ಉಪನ್ಯಾಸ ನೀಡುತ್ತಾ ಬಂದಿರುವ ನಿರ್ಭಯಾನಂದ ಶ್ರೀಗಳು ಮೂರು ತಿಂಗಳ ಕಾಲ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ಶ್ರೀಗಳು ಅಮೆರಿಕಾದಿಂದ ಹಿಂದುರುಗಿದ ನಂತರ ಸಂಡೂರು, ಸಿರುಗುಪ್ಪ, ಕಂಪ್ಲಿ ಮತ್ತು ಕುರುಗೋಡು ಮತ್ತಿತರ ಕಡೆಗಳಲ್ಲಿ ವಿವೇಕ ಲೀಲಾಮೃತ ಉಪನ್ಯಾಸ ಮಾಲಿಕೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಎಸ್.ಆರ್.ಎಂ. ಶರಣಬಸವರಾಜ ಸಿದ್ಧರಾಂಪುರ ಅವರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಮುದ್ದಟನೂರು ಎಚ್.ತಿಪ್ಪೇಸ್ವಾಮಿ ಹಾರ್ಮೋನಿಯಂ ಹಾಗೂ ಸುಧಾಕರ್ ತಬಲ ಸಾಥ್ ನೀಡಿದರು.
ಆಧ್ಯಾತ್ಮಿಕ ಚಿಂತಕ ಪಲ್ಲೇದ ಪಂಪಾಪತೆಪ್ಪ, ಲೆಕ್ಕ ಪರಿಶೋಧಕ ಕೆ. ರಾಜಶೇಖರ ಅವರು ಅತಿಥಿಗಳಾಗಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

