Dailyhunt Logo
  • Light mode
    Follow system
    Dark mode
    • Play Story
    • App Story
ಯುಕೆಪಿ ಹಂತ-3:ಭೂಸ್ವಾಧೀನ ಜಮೀನುಗಳ ಕಟ್ಟಡಗಳ ಮೌಲ್ಯಮಾಪನ ಕಾರ್ಯ

ಯುಕೆಪಿ ಹಂತ-3:ಭೂಸ್ವಾಧೀನ ಜಮೀನುಗಳ ಕಟ್ಟಡಗಳ ಮೌಲ್ಯಮಾಪನ ಕಾರ್ಯ

ಬಾಗಲಕೋಟೆ, 03 ಜುಲೈ (ಹಿ.ಸ.)

ಯಂಕರ್ : ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಹಂತ-3ರ ಅಡಿಯಲ್ಲಿ ಮುಳುಗಡೆಯಾಗಲಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದ ಭೂಸ್ವಾಧೀನಗೊಂಡ ಜಮೀನುಗಳಲ್ಲಿನ ಕಟ್ಟಡಗಳ ಮೌಲ್ಯಮಾಪನ ಕಾರ್ಯವನ್ನು ಸಂಬಂಧಿಸಿದ ಅಧಿಕಾರಿಗಳು ಸ್ಥಳದಲ್ಲೇ ಪರಿಶೀಲನೆ ನಡೆಸುವ ಮೂಲಕ ಕೈಗೊಂಡರು.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕೃಷ್ಣಾ ಮೇಲ್ದಂಡೆ ಯೋಜನೆ, ಪುನರ್ವಸತಿ ಉಪ ವಿಭಾಗ ಸಂಖ್ಯೆ-8, ಜಮಖಂಡಿ ಕಚೇರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಭೂಸ್ವಾಧೀನಗೊಂಡ ಜಮೀನುಗಳಲ್ಲಿರುವ ಮನೆಗಳು, ವಾಣಿಜ್ಯ ಕಟ್ಟಡಗಳು ಹಾಗೂ ಇತರೆ ಶಾಶ್ವತ ನಿರ್ಮಾಣಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದರು.

ಕಟ್ಟಡಗಳ ಗಾತ್ರ, ನಿರ್ಮಾಣದ ಗುಣಮಟ್ಟ, ವಯಸ್ಸು ಹಾಗೂ ಇತರೆ ತಾಂತ್ರಿಕ ಅಂಶಗಳನ್ನು ಆಧರಿಸಿ ಮೌಲ್ಯಮಾಪನ ಪ್ರಕ್ರಿಯೆ ನಡೆಸಲಾಯಿತು. ಈ ಮೌಲ್ಯ ಮಾಪನ ವರದಿಯ ಆಧಾರದ ಮೇಲೆ ಸರ್ಕಾರದ ನಿಯಮಾನುಸಾರ ಪರಿಹಾರ ಮೊತ್ತವನ್ನು ನಿಗದಿಪಡಿಸುವ ಪ್ರಕ್ರಿಯೆ ಮುಂದುವರಿಯಲಿದ್ದು, ಯೋಜನೆಯಿಂದ ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ನ್ಯಾಯಸಮ್ಮತ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸ್ಥಳ ಪರಿಶೀಲನೆ ವೇಳೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಮೌಲ್ಯಮಾಪನ ಕಾರ್ಯವನ್ನು ಪಾರದರ್ಶಕವಾಗಿ ಮತ್ತು ನಿಗದಿತ ಮಾರ್ಗಸೂಚಿಗಳ ಅನುಸಾರ ನಡೆಸಲಾಯಿತು. ಯೋಜನೆಯಿಂದ ಮುಳುಗಡೆಯಾಗುವ ಪ್ರದೇಶಗಳ ಪುನರ್ವಸತಿ ಹಾಗೂ ಪುನರ್ನಿರ್ಮಾಣ ಕಾರ್ಯಗಳಿಗೆ ಈ ಪ್ರಕ್ರಿಯೆ ಮಹತ್ವದ ಹಂತವಾಗಿದ್ದು, ಮುಂದಿನ ಆಡಳಿತಾತ್ಮಕ ಕ್ರಮಗಳಿಗೆ ಇದು ಆಧಾರವಾಗಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada