ಬೆಂಗಳೂರು, ಜೂ.21: ಕೋವಿಡ್ ಸಂಬಂಧ ಆರೋಗ್ಯ ತಜ್ಞ ಡಾ.ದೇವಿಶೆಟ್ಟಿ ಅವರ ವರದಿಯು ತಮ್ಮ ಕೈಸೇರಿದ ಬಳಿಕ ಅದನ್ನು ಕೂಲಂಕಶವಾಗಿ ಪರಿಶೀಲಿಸಿ, ಶಾಲಾ ಚಟುವಟಿಕೆಗಳ ಕುರಿತಂತೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದೆಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾಗಲಿದೆ ಎನ್ನಲಾಗುತ್ತಿರುವ ಡಾ.ದೇವಿಶೆಟ್ಟಿ ಅವರ ವರದಿಯಲ್ಲಿ ತರಗತಿ ಕಲಿಕೆಯ ಬಗ್ಗೆ ಉಲ್ಲೇಖವಿದೆ ಎಂದು ಮಾಧ್ಯಮಗಳಲ್ಲಿಯಷ್ಟೇ ನೋಡಿದ್ದೇನೆ. ವರದಿ ತಮ್ಮ ಕೈಸೇರಿದ ಬಳಿಕವಷ್ಟೇ ಪ್ರತಿಕ್ರಯಿಸಲು ಸಾಧ್ಯ ಎಂದರು.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಡೆಸಿದ ಅಧ್ಯಯನದಲ್ಲಿ ಶಾಲೆಗಳು ನಡೆಯದ ಕಾರಣ ಶೇ.30ರಷ್ಟು ಮಕ್ಕಳು ಕಲಿಕೆಯಿಂದ ಹೊರಗುಳಿದು ಶೈಕ್ಷಣಿಕ ಚಟುವಟಿಕೆಗಳಿಂದ ಹೊರಗುಳಿದಿದ್ದಾರೆ ಎಂಬ ಅಂಶವು ಬಹಿರಂಗಗೊಂಡಿದೆ.
ಈ ಅಧ್ಯಯನ ವರದಿಯ ಬೆಳಕಿನಲ್ಲಿ ನಾವು ಈ ವರ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಹೆಚ್ಚಿನ ರೀತಿಯ ಗಮನಹರಿಸುವ ಸವಾಲು ನಮ್ಮ ಮುಂದಿದೆ ಎಂದು ನುಡಿದರು.
ಸರ್ಕಾರಕ್ಕೆ ಶಾಲೆಗಳನ್ನು ತೆರೆಯಬೇಕೆಂಬ ಉತ್ಸುಕತೆ, ತರಗತಿ ಕಲಿಕೆ ಮುಖ್ಯವೆನ್ನುವುದು ಸಾಮಾನ್ಯ ಅಭಿಪ್ರಾಯವಾಗಿದ್ದರೂ ಹಲವಾರು ಅಂಶಗಳನ್ನು ಗಮನಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಡಾ.ದೇವಿಶೆಟ್ಟಿ ಅವರು ಸಲ್ಲಿಸಲಿರುವ ವರದಿಯನ್ನು ಪರಿಪೂರ್ಣವಾಗಿ ಗಮನಿಸಿ ಕ್ಲಪ್ತ ಸಮಯದಲ್ಲಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.

