Dailyhunt Logo
  • Light mode
    Follow system
    Dark mode
    • Play Story
    • App Story
12 ವರ್ಷಗಳ ವಂಚನೆಯ ಆಟಕ್ಕೆ ಬಿತ್ತು ಬ್ರೇಕ್: ನಕಲಿ ಡಿವೈಎಸ್‌ಪಿ ಕೊನೆಗೂ ಅರೆಸ್ಟ್!

12 ವರ್ಷಗಳ ವಂಚನೆಯ ಆಟಕ್ಕೆ ಬಿತ್ತು ಬ್ರೇಕ್: ನಕಲಿ ಡಿವೈಎಸ್‌ಪಿ ಕೊನೆಗೂ ಅರೆಸ್ಟ್!

Hosadigantha 2 weeks ago

ಹೊಸದಿಗಂತ ವರದಿ ವಿಜಯಪುರ:

ನಿರುದ್ಯೋಗಿ ಯುವಕರಿಗೆ ಪಿಎಸ್‌ಐ, ಪೊಲೀಸ್ ನೌಕರಿ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ.ಗಳನ್ನು ವಂಚಿಸಿ, ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ನಕಲಿ ಡಿವೈಎಸ್‌ಪಿಯೊಬ್ಬನನ್ನು ನಗರದ ಎಪಿಎಂಸಿ ಪೊಲೀಸ್ ಠಾಣೆಯ ತನಿಖಾ ತಂಡ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ವರಗೋಡದಿನ್ನಿಯ ಗ್ಯಾನನಗೌಡ ಉರ್ಫ್ ಜ್ಞಾನಗೌಡ ಉರ್ಫ್ ಗಣೇಶ ಉರ್ಫ್ ಸಿ. ಸಂಪತ್‌ಕುಮಾರ ಸಿದ್ದನಗೌಡ ಪಾಟೀಲ (31) ಬಂಧಿತ ಆರೋಪಿ.

ಆರೋಪಿ ತಾನು ಡಿವೈಎಸ್‌ಪಿ ಎಂದು ಹೇಳಿಕೊಂಡು ಖಾಕಿ ಸಮವಸ್ತ್ರ ಧರಿಸಿ ನಿರುದ್ಯೋಗಿ ಯುವಕರಿಗೆ ಪೊಲೀಸ್ ಹಾಗೂ ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ. 2012ರಲ್ಲಿ ನಗರ ಹೊರ ವಲಯದ ಗಾಂಧಿನಗರ ನಿವಾಸಿ ವಿಠ್ಠಲ ಛಾಯಾಗೋಳ ಅವರ ಸಂಬಂಧಿಕನಿಗೆ ಪೊಲೀಸ್ ಉದ್ಯೋಗ ಕೊಡಿಸುವುದಾಗಿ ಹೇಳಿ 1.20 ಲಕ್ಷ ರೂ. ಪಡೆದುಕೊಂಡಿದ್ದ. ನಂತರ ಹಣ ವಾಪಸ್ ಕೇಳಿದ ಹಿನ್ನೆಲೆಯಲ್ಲಿ 2014ರ ಮಾರ್ಚ್ 26 ರಂದು ವಿಠ್ಠಲರನ್ನು ಅಪಹರಿಸಿ, ಹಲ್ಲೆ ನಡೆಸಿ, ಕೊಪ್ಪಳ ಜಿಲ್ಲೆಯ ಹುಲಗಿ ಗ್ರಾಮದ ಕಾಲುವೆಯಲ್ಲಿ ಗೋಣಿಚೀಲದಲ್ಲಿ ಹಾಕಿ ಕೊಲೆ ಮಾಡಲು ಯತ್ನಿಸಿದ ಆರೋಪವೂ ಈತನ ಮೇಲಿದೆ. ಈ ಸಂಬಂಧ ವಿಜಯಪುರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯೊಂದಿಗೆ ಮತ್ತಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದರಿಂದ ಪ್ರಕರಣವನ್ನು ಎಲ್‌ಪಿಆರ್ ಎಂದು ಪರಿಗಣಿಸಲಾಗಿತ್ತು.

ತಲೆಮರೆಸಿಕೊಂಡಿದ್ದ ಅವಧಿಯಲ್ಲಿಯೂ ಆರೋಪಿ ತನ್ನ ಕೃತ್ಯ ಮುಂದುವರಿಸಿದ್ದು, 2026 ರಲ್ಲಿ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ರೇವಣಸಿದ್ದಪ್ಪ ದೊಡಮನಿ ಅವರ ಮಗನಿಗೆ ಜೈಲರ್ ಉದ್ಯೋಗ ಕೊಡಿಸುವುದಾಗಿ ಹೇಳಿ 8 ಲಕ್ಷ ರೂ. ಪಡೆದು ವಂಚಿಸಿದ ಆರೋಪವೂ ದಾಖಲಾಗಿದೆ.

ಇಲ್ಲಿನ ಎಪಿಎಂಸಿ ಠಾಣೆಯ ಪಿಎಸ್‌ಐ ಬಸವರಾಜ ತಿಪ್ಪರೆಡ್ಡಿ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಹಾಗೂ ವಿವಿಧ ಮೊಬೈಲ್ ಸಂಖ್ಯೆಗಳ ವಿಶ್ಲೇಷಣೆ ಆಧರಿಸಿ ಆರೋಪಿಯು ಬೆಂಗಳೂರಿನಲ್ಲಿ ಇರುವುದನ್ನು ಪತ್ತೆಹಚ್ಚಿತು. ಜು. 6 ರಂದು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಅರ್ಹ ಮತದಾರರು ಬಿಟ್ಟುಹೋಗದಂತೆ ಕ್ರಮವಹಿಸಿ: ಮತದಾರರ ಪಟ್ಟಿಗಳ ವೀಕ್ಷಕ ಆಮ್ಲಾನ್ ಆದಿತ್ಯ ಬಿಸ್ವಾಸ್ ನಿರ್ದೇಶನ

ಆರೋಪಿಯ ವಿರುದ್ಧ 2012 ರಿಂದ ಮುದ್ದೇಬಿಹಾಳ, ವಿಜಯಪುರ ಎಪಿಎಂಸಿ, ಆದರ್ಶನಗರ ಹಾಗೂ ತಾಳಿಕೋಟೆ ಪೊಲೀಸ್ ಠಾಣೆಗಳಲ್ಲಿ ವಂಚನೆ, ವೇಷಧಾರಣೆ, ಕೊಲೆ ಯತ್ನ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ.

ಸುಮಾರು 12 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha