ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯನ್ನು ಯಾವುದೇ ಅಹಿತಕರ ಘಟನೆಗಳಿಲ್ಲದೆ ನಡೆಸಲು ಬೆಂಗಳೂರು ಪೊಲೀಸರು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.
ಫೀಲ್ಡ್ ಮಾರ್ಷಲ್ ಮಾಣಿಕ್‌ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ಕಟ್ಟುನಿಟ್ಟಿನ ನಿಗಾ ವಹಿಸಲಿದ್ದಾರೆ.
ಭದ್ರತೆ ಮತ್ತು ಸಂಚಾರ ನಿರ್ವಹಣೆಗಾಗಿ ಒಟ್ಟು 1,583 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಾಣಿಕ್‌ಷಾ ಪರೇಡ್ ಮೈದಾನದಲ್ಲಿ ಕಟ್ಟುನಿಟ್ಟಿನ ನಿಗಾ
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಪರೇಡ್ ಮೈದಾನದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೈದಾನದ ಒಳಗೆ ಹಾಗೂ ಹೊರಭಾಗದಲ್ಲಿ ಸುಮಾರು 110 ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ಇರಿಸಲಾಗಿದೆ. ಹೋಟೆಲ್, ಲಾಡ್ಜ್‌ಗಳು ಮತ್ತು ಇತರ ವಸತಿ ಪ್ರದೇಶಗಳಲ್ಲಿಯೂ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಕಣ್ಣಿಡಲಾಗಿದೆ.
1,100 ಪೊಲೀಸ್ ಸಿಬ್ಬಂದಿ ಭದ್ರತಾ ಕರ್ತವ್ಯದಲ್ಲಿ
ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮಾಹಿತಿ ಪ್ರಕಾರ, ಭದ್ರತಾ ವ್ಯವಸ್ಥೆಗಾಗಿ 9 ಡಿಸಿಪಿಗಳು, 17 ಎಸಿಪಿಗಳು, 49 ಪಿಐಗಳು, 106 ಪಿಎಸ್‌ಐಗಳು ಸೇರಿದಂತೆ ಒಟ್ಟು 1,100 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಂಚಾರ ನಿಯಂತ್ರಣಕ್ಕೂ ವಿಶೇಷ ವ್ಯವಸ್ಥೆ
ನಗರದಲ್ಲಿ ವಾಹನ ಸಂಚಾರ ಸುಗಮವಾಗಿರಲು ಪ್ರತ್ಯೇಕವಾಗಿ 483ಕ್ಕೂ ಹೆಚ್ಚು ಸಂಚಾರ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹೀಗಾಗಿ ಭದ್ರತೆ ಮತ್ತು ಸಂಚಾರ ನಿರ್ವಹಣೆ ಸೇರಿದಂತೆ ಒಟ್ಟು 1,583 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಶಿವಂ ಅಸೋಸಿಯೇಟ್ಸ್ ಹೂಡಿಕೆ ವಂಚನೆ: ಶಿವಾನಂದ ನೀಲಣ್ಣನವರ್ ಬಂಧನ, 12 ದಿನ ಇಡಿ ಕಸ್ಟಡಿ
ತಪಾಸಣೆಗೆ ಮೆಟಲ್ ಡಿಟೆಕ್ಟರ್, ಸ್ಕ್ಯಾನರ್
ಪರೇಡ್ ಮೈದಾನದಲ್ಲಿ ಏಳು ಕೆಎಸ್‌ಆರ್‌ಪಿ ಅಥವಾ ಸಿಎಆರ್ ತುಕಡಿಗಳು, ನಾಲ್ಕು ಅಗ್ನಿಶಾಮಕ ವಾಹನಗಳು, ಮೂರು ಆಂಬ್ಯುಲೆನ್ಸ್‌ಗಳು, ಕ್ಯೂಆರ್‌ಟಿ, ಡಿ-ಸ್ವಾಟ್ ಹಾಗೂ ರ್ಯಾಪಿಡ್ ಇಂಟರ್‌ವೆನ್ಶನ್ ವಾಹನವನ್ನು ಸಿದ್ಧವಾಗಿಡಲಾಗಿದೆ. ಪ್ರವೇಶದ ಬಳಿ ನಾಲ್ಕು ಬ್ಯಾಗೇಜ್ ಸ್ಕ್ಯಾನರ್, 20 ಡಿಎಫ್‌ಎಂಡಿ ಮತ್ತು 40 ಹೆಚ್‌ಹೆಚ್‌ಎಂಡಿ ಉಪಕರಣಗಳನ್ನು ಬಳಸಲಾಗುತ್ತದೆ.
ಕಾರ್ಯಕ್ರಮಕ್ಕೆ ಕೆಲ ವಸ್ತುಗಳಿಗೆ ನಿರ್ಬಂಧ
ಸಿಗರೇಟ್, ಬೆಂಕಿಪೊಟ್ಟಣ, ಚಾಕು, ಬ್ಲೇಡ್, ಶಸ್ತ್ರಾಸ್ತ್ರ, ಪಟಾಕಿ, ಸ್ಫೋಟಕ ವಸ್ತು, ಮದ್ಯ ಮತ್ತು ಮಾದಕ ವಸ್ತುಗಳನ್ನು ಕಾರ್ಯಕ್ರಮದ ಸ್ಥಳಕ್ಕೆ ತರಲು ಅವಕಾಶವಿಲ್ಲ. ಸಾರ್ವಜನಿಕರು ಅನಗತ್ಯ ವಸ್ತುಗಳನ್ನು ತರದೆ ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
'ಫ್ರೀಡಂ ಹಬ್ಬ'ಕ್ಕೂ ಬಿಗಿ ಬಂದೋಬಸ್ತ್
ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿರುವ 'ಫ್ರೀಡಂ ಹಬ್ಬ' ಕಾರ್ಯಕ್ರಮಕ್ಕೂ ವಿಶೇಷ ಭದ್ರತೆ ಕಲ್ಪಿಸಲಾಗಿದೆ. ಇಲ್ಲಿ 3,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಬರುವವರು ಸಾರ್ವಜನಿಕ ಸಾರಿಗೆ ಮತ್ತು ಮೆಟ್ರೋ ಬಳಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

