Dailyhunt
ಬಹುಮತದ ಗಡಿಯಲ್ಲಿ ಟಿವಿಕೆ: ರಾಜ್ಯಪಾಲರ ಅಂತಿಮ ತೀರ್ಮಾನದತ್ತ ಎಲ್ಲರ ಚಿತ್ತ!

ಬಹುಮತದ ಗಡಿಯಲ್ಲಿ ಟಿವಿಕೆ: ರಾಜ್ಯಪಾಲರ ಅಂತಿಮ ತೀರ್ಮಾನದತ್ತ ಎಲ್ಲರ ಚಿತ್ತ!

Hosadigantha 6 days ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ದಿನಗಳೇ ಕಳೆದರೂ, ಅತಂತ್ರ ಸ್ಥಿತಿಯಲ್ಲಿರುವ ರಾಜಕೀಯ ಚಿತ್ರಣಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ನಡುವೆ, ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ವಿಜಯ್ ಅವರು ಗುರುವಾರ ಬೆಳಿಗ್ಗೆ ರಾಜ್ಯಪಾಲ ಆರ್‌ವಿ ಅರ್ಲೇಕರ್ ಅವರನ್ನು ಭೇಟಿಯಾಗಿ, ತಮಗೆ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ.

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಕನಿಷ್ಠ 118 ಸದಸ್ಯರ ಬಲದ ಅಗತ್ಯವಿದೆ. ವಿಜಯ್ ನೇತೃತ್ವದ ಟಿವಿಕೆ ಪ್ರಸ್ತುತ ಅತಿದೊಡ್ಡ ಪಕ್ಷವಾಗಿದ್ದರೂ, ಮ್ಯಾಜಿಕ್ ನಂಬರ್ ತಲುಪಲು ಹೋರಾಡುತ್ತಿದೆ. ವಿಜಯ್ ಅವರು ಎರಡು ಕ್ಷೇತ್ರಗಳಲ್ಲಿ (ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರು) ಜಯಗಳಿಸಿದ್ದು, ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಬಳಿಕ ಟಿವಿಕೆಯ ಒಟ್ಟು ಬಲ 107ಕ್ಕೆ ಇಳಿಯಲಿದೆ.

ಈಗಾಗಲೇ ಕಾಂಗ್ರೆಸ್‌ನ 5 ಶಾಸಕರು ವಿಜಯ್ ಅವರಿಗೆ ಬೆಂಬಲ ಪತ್ರ ನೀಡಿದ್ದಾರೆ. ಇದರ ಬೆನ್ನಲ್ಲೇ, ಈ ಹಿಂದೆ ಡಿಎಂಕೆ ಮೈತ್ರಿಕೂಟದಲ್ಲಿದ್ದ ಭಾರತೀಯ ಕಮ್ಯುನಿಸ್ಟ್ ಪಕ್ಷ ಕೂಡ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಲು ನಿರ್ಧರಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಹೊಸ ಬೆಳವಣಿಗೆಯಿಂದ ವಿಜಯ್ ಪಾಳಯದ ಬಲ ಹೆಚ್ಚಾಗಿದ್ದು, ಬಹುಮತ ಸಾಬೀತುಪಡಿಸಲು ಈಗ ಕೇವಲ ಕೆಲವೇ ಸ್ಥಾನಗಳ ಅವಶ್ಯಕತೆ ಇದೆ.

ಎರಡು ದಿನಗಳಲ್ಲಿ ಇದು ರಾಜ್ಯಪಾಲರೊಂದಿಗೆ ವಿಜಯ್ ನಡೆಸುತ್ತಿರುವ ಎರಡನೇ ಮಹತ್ವದ ಸಭೆಯಾಗಿದೆ. ಆದರೆ, ರಾಜ್ಯಪಾಲ ಆರ್‌ವಿ ಅರ್ಲೇಕರ್ ಅವರು ಸಂಖ್ಯಾಬಲದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಕೋರಿದ್ದಾರೆ. ಶಾಸಕರ ಬೆಂಬಲದ ಬಗ್ಗೆ ಸಂಪೂರ್ಣ ಮನವರಿಕೆಯಾಗುವವರೆಗೂ ಪ್ರಮಾಣ ವಚನಕ್ಕೆ ಅವಕಾಶ ನೀಡುವುದು ಕಷ್ಟ ಎಂದು ರಾಜ್ಯಪಾಲರು ಸೂಚಿಸಿರುವುದರಿಂದ ವಿಜಯ್ ಪದಗ್ರಹಣ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಒಂದೆಡೆ ಎಐಎಡಿಎಂಕೆ ನಾಯಕ ಕೆ.ಪಿ. ಮುನುಸ್ವಾಮಿ ಅವರು, "ಯಾವುದೇ ಪರಿಸ್ಥಿತಿಯಲ್ಲೂ ನಾವು ವಿಜಯ್ ಅವರನ್ನು ಬೆಂಬಲಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಡಿಎಂಕೆ ಮೈತ್ರಿಕೂಟದಲ್ಲಿದ್ದ ಕಾಂಗ್ರೆಸ್ ಮತ್ತು ಸಿಪಿಐ ಪಕ್ಷಗಳು ವಿಜಯ್ ಬೆನ್ನಿಗೆ ನಿಂತಿರುವುದು ತಮಿಳುನಾಡಿನ ಬದಲಾದ ರಾಜಕೀಯ ಗಾಳಿಗೆ ಸಾಕ್ಷಿಯಾಗಿದೆ.

ಚಲನಚಿತ್ರ ರಂಗದಿಂದ ರಾಜಕೀಯಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ವಿಜಯ್, ಈಗ ತಮ್ಮ ವೃತ್ತಿಜೀವನದ ಅತಿ ದೊಡ್ಡ 'ಕ್ಲೈಮ್ಯಾಕ್ಸ್' ಹಂತದಲ್ಲಿದ್ದಾರೆ. ವಿರೋಧಿಗಳ ತಂತ್ರಗಳನ್ನು ಮೆಟ್ಟಿ ನಿಂತು ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆಯೇ ಎಂಬುದನ್ನು ಇಡೀ ದೇಶ ಕುತೂಹಲದಿಂದ ಕಾಯುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha