Dailyhunt Logo
  • Light mode
    Follow system
    Dark mode
    • Play Story
    • App Story
ಬಂಡೆಯಂತೆ ನಿಲ್ಲುವ ಹೆಗಲಿಗೂ ಬೇಕು ನೆರಳು: ಪುರುಷರ ಮಾನಸಿಕ ಆರೋಗ್ಯದ ಕಡೆಗೊಂದು ನೋಟ

ಬಂಡೆಯಂತೆ ನಿಲ್ಲುವ ಹೆಗಲಿಗೂ ಬೇಕು ನೆರಳು: ಪುರುಷರ ಮಾನಸಿಕ ಆರೋಗ್ಯದ ಕಡೆಗೊಂದು ನೋಟ

Hosadigantha 1 day ago

ಸಮಾಜದಲ್ಲಿ "ಗಂಡು ಅಂದ್ಮೇಲೆ ಗಟ್ಟಿಯಾಗಿರಬೇಕು, ಅಳಬಾರದು" ಎಂಬ ಮಾತೊಂದು ತಲೆಮಾರುಗಳಿಂದ ಬೇರುಬಿಟ್ಟಿದೆ. ಮನೆಯ ಜವಾಬ್ದಾರಿ, ದುಡಿಮೆಯ ಒತ್ತಡ, ಕುಟುಂಬದ ನಿರೀಕ್ಷೆಗಳ ಭಾರವನ್ನು ಹೊತ್ತು ಸಾಗುವ ಪುರುಷರು ತಮ್ಮೊಳಗಿನ ತಲ್ಲಣಗಳನ್ನು ಹೊರಹಾಕಲು ಹಿಂಜರಿಯುತ್ತಾರೆ.

ಆದರೆ, ಕಬ್ಬಿಣದ ಕಂಬಕ್ಕೂ ತುಕ್ಕು ಹಿಡಿಯುವಂತೆ, ಮನುಷ್ಯನ ಮನಸ್ಸಿಗೂ ದಣಿವು, ನೋವು ಮತ್ತು ಭಯ ಸಹಜ. ಪುರುಷರಿಗೂ ಭಾವನಾತ್ಮಕ ಬೆಂಬಲದ ಅವಶ್ಯಕತೆಯಿದೆ ಎಂಬ ಸತ್ಯವನ್ನು ಈಗಲಾದರೂ ಸಮಾಜ ಗಂಭೀರವಾಗಿ ಒಪ್ಪಿಕೊಳ್ಳಬೇಕಿದೆ.

ಹಲವು ಪುರುಷರು ತಮ್ಮ ಸೋಲು, ಆತಂಕ ಅಥವಾ ಒಂಟಿತನವನ್ನು ಯಾರ ಬಳಿಯೂ ಹಂಚಿಕೊಳ್ಳಲಾಗದೆ ಒಳಗೊಳಗೇ ಕೊರಗುತ್ತಾರೆ. ಸಮಾಜದ ಕಟ್ಟುಪಾಡುಗಳಿಗೆ ಹೆದರಿ ಭಾವನೆಗಳನ್ನು ಅದುಮಿಟ್ಟುಕೊಳ್ಳುವುದು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಖಿನ್ನತೆ, ನಿದ್ರಾಹೀನತೆ ಮತ್ತು ಅತಿಯಾದ ಕೋಪದಂತಹ ಲಕ್ಷಣಗಳು ಹೊರಗೆ ಕಾಣಿಸಿಕೊಂಡರೂ, ಅದರ ಮೂಲದಲ್ಲಿ ಭಾವನಾತ್ಮಕ ಅಭದ್ರತೆ ಇರುತ್ತದೆ. ಮನಬಿಚ್ಚಿ ಮಾತನಾಡಲು ಒಂದು ಸುರಕ್ಷಿತ ವಾತಾವರಣ ಸಿಗದಿದ್ದಾಗ ಮೌನವೇ ಅವರ ಸಂಗಾತಿಯಾಗುತ್ತದೆ.

ತನ್ನ ನೋವನ್ನು ಹೇಳಿಕೊಳ್ಳುವುದು ಅಥವಾ ಕಣ್ಣೀರು ಹಾಕುವುದು ಪುರುಷತ್ವದ ಕೊರತೆಯಲ್ಲ. ಅದು ತನ್ನನ್ನು ತಾನು ಅರ್ಥಮಾಡಿಕೊಂಡಿರುವ ಪ್ರಬುದ್ಧತೆಯ ಸಂಕೇತ. ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಸಂಗಾತಿ ಪುರುಷರ ಮಾತನ್ನು ಜಡ್ಜ್ ,ಮಾಡದೇ ಕೇಳಿಸಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. "ನಾನು ನಿನ್ನ ಜೊತೆಗಿದ್ದೇನೆ" ಎಂಬ ಒಂದೇ ಒಂದು ಸಾಂತ್ವನದ ಮಾತು ಎಷ್ಟೋ ಬಿಕ್ಕಟ್ಟುಗಳನ್ನು ಪರಿಹರಿಸಬಲ್ಲದು.

ಪುರುಷರ ಭಾವನಾತ್ಮಕ ಯೋಗಕ್ಷೇಮವು ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಲ್ಲ. ಅದು ಇಡೀ ಕುಟುಂಬದ ನೆಮ್ಮದಿಗೆ ಆಧಾರ. ಮನಸ್ಸಿನ ಭಾರವನ್ನು ಇಳಿಸಿಕೊಳ್ಳಲು ಆಪ್ತಸಮಾಲೋಚನೆ, ಮುಕ್ತ ಸಂವಾದ ಮತ್ತು ಪರಸ್ಪರ ಗೌರವ ಅತ್ಯಗತ್ಯ. ಭಾವನೆಗಳಿಗೆ ಬೆಲೆ ಕೊಡುವ, ಮಾತುಗಳಿಗೆ ಕಿವಿಯಾಗುವ ಸಮಾಜ ನಿರ್ಮಾಣವಾದಾಗ ಮಾತ್ರ ಪ್ರತಿಯೊಬ್ಬ ಮನುಷ್ಯನೂ ನಿಜವಾದ ಅರ್ಥದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯ.

Dailyhunt
Disclaimer: This content has not been generated, created or edited by Dailyhunt. Publisher: Hosadigantha