Dailyhunt Logo
  • Light mode
    Follow system
    Dark mode
    • Play Story
    • App Story
ಭಾರತದತ್ತ ನೋಡಿ, ಕಲಿಯಿರಿ: ಭಾರತದ ಆರ್ಥಿಕ ಸಾಮರ್ಥ್ಯವನ್ನು ಶ್ಲಾಘಿಸಿದ ಡೊನಾಲ್ಡ್ ಟ್ರಂಪ್

ಭಾರತದತ್ತ ನೋಡಿ, ಕಲಿಯಿರಿ: ಭಾರತದ ಆರ್ಥಿಕ ಸಾಮರ್ಥ್ಯವನ್ನು ಶ್ಲಾಘಿಸಿದ ಡೊನಾಲ್ಡ್ ಟ್ರಂಪ್

Hosadigantha 1 day ago

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಆರ್ಥಿಕತೆ ತೀವ್ರ ಅಪಾಯದಲ್ಲಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಆರ್ಥಿಕ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ತಮ್ಮ ರಿಪಬ್ಲಿಕನ್ ಪಕ್ಷಕ್ಕೆ ಎದುರಾದ ಹಿನ್ನಡೆಯ ಬಳಿಕ, ಶುಕ್ರವಾರ ಶ್ವೇತಭವನದಲ್ಲಿ ಸುಮಾರು 90 ನಿಮಿಷಗಳ ಕಾಲ ನಡೆದ ಮೊದಲ ಪ್ರಮುಖ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಈ ಮಹತ್ವದ ಹೇಳಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಮೆರಿಕದ ಆರ್ಥಿಕ ನೀತಿಗಳು ಮತ್ತು ಹೆಚ್ಚಿನ ಬಡ್ಡಿದರದ ಬಗ್ಗೆ ಮಾತನಾಡುವಾಗ ಟ್ರಂಪ್ ಅವರು ಭಾರತವನ್ನು ಮಾದರಿಯಾಗಿ ಉಲ್ಲೇಖಿಸಿದರು. "ಭಾರತದತ್ತ ಒಮ್ಮೆ ನೋಡಿ, ಅಲ್ಲಿ ಕಡಿಮೆ ಬಡ್ಡಿದರವಿದೆ ಮತ್ತು ಶೇ. 7ರಷ್ಟು ಭರ್ಜರಿ ಆರ್ಥಿಕ ಬೆಳವಣಿಗೆ ದರವಿದೆ" ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದಂತೆ ಬಡ್ಡಿದರಗಳನ್ನು ಕಡಿಮೆ ಮಾಡಿದರೆ, ಅಮೆರಿಕ ಕೂಡ ಶೇ. 15ರಿಂದ 20ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು. ಈ ಮೂಲಕ ಅಮೆರಿಕದ ಕೇಂದ್ರ ಬ್ಯಾಂಕ್ (ಫೆಡರಲ್ ರಿಸರ್ವ್) ನೀತಿಗಳನ್ನು ಟೀಕಿಸುತ್ತಲೇ, ಭಾರತದ ಆರ್ಥಿಕ ಬಲವನ್ನು ಜಗತ್ತಿನ ಮುಂದಿಟ್ಟರು.

ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳನ್ನೊಳಗೊಂಡ 'ಕ್ವಾಡ್' ಒಕ್ಕೂಟದ ವಾಣಿಜ್ಯ ಮತ್ತು ಕಾರ್ಯತಂತ್ರದ ಶಕ್ತಿಯನ್ನು ಟ್ರಂಪ್ ಇದೇ ವೇಳೆ ಕೊಂಡಾಡಿದರು. ಜಾಗತಿಕ ಆರ್ಥಿಕ ಭದ್ರತೆ, ಪೂರೈಕೆ ಸರಪಳಿ ಮತ್ತು ಸಾಗರ ಭದ್ರತೆಯಲ್ಲಿ ಕ್ವಾಡ್ ದೇಶಗಳ ಸಹಕಾರ ಅತ್ಯಂತ ನಿರ್ಣಾಯಕವಾಗಿದೆ ಎಂದು ಅವರು ತಿಳಿಸಿದರು. ಇದಕ್ಕೆ ದನಿಗೂಡಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, "ಕ್ವಾಡ್ ಸದಸ್ಯ ರಾಷ್ಟ್ರಗಳು ಜಗತ್ತಿನ ನಾಲ್ಕು ಅತ್ಯಂತ ಶಕ್ತಿಶಾಲಿ ಆರ್ಥಿಕತೆಗಳಾಗಿವೆ. ಇವು ಒಟ್ಟಾಗಿ ಕೆಲಸ ಮಾಡಿದರೆ ಅಮೆರಿಕನ್ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆ ಮತ್ತು ಉದ್ಯೋಗ ಸೃಷ್ಟಿಯಾಗಲಿದೆ" ಎಂದರು. ಅಲ್ಲದೆ, 2027ರ ಆರಂಭದಲ್ಲಿ ಕ್ವಾಡ್ ತನ್ನ ಚೊಚ್ಚಲ 'ಬಿಸಿನೆಸ್ ಲೀಡರ್ಸ್ ಫೋರಂ' ಆಯೋಜಿಸಲು ಸಜ್ಜಾಗಿದ್ದು, ಭಾರತದ ವಾಣಿಜ್ಯ ನಗರಿ ಮುಂಬೈ ಈ ಮೊದಲ ಆವೃತ್ತಿಯ ಆತಿಥ್ಯ ವಹಿಸಲಿದೆ.

ಚುನಾವಣಾ ಹಿನ್ನಡೆಯ ನಂತರ ತಮ್ಮ ಆಡಳಿತದ ನಿರ್ಧಾರಗಳನ್ನು ಸಮರ್ಥಿಸಿಕೊಂಡ ಟ್ರಂಪ್, ವಲಸೆ ನೀತಿ ಹಾಗೂ ಇತರ ಪ್ರಮುಖ ಆಂತರಿಕ ವಿಚಾರಗಳಲ್ಲಿ ವಿರೋಧ ಪಕ್ಷವಾದ ಡೆಮೊಕ್ರಾಟ್‌ಗಳೊಂದಿಗೆ ಕೈಜೋಡಿಸಿ ಕೆಲಸ ಮಾಡಲು ಮುಕ್ತ ಮನಸ್ಸಿರುವುದಾಗಿ ಸಂಕೇತ ನೀಡಿದ್ದಾರೆ. ಒಟ್ಟಿನಲ್ಲಿ, ಭಾರತದ ಆರ್ಥಿಕತೆಯ ಬಗ್ಗೆ ಸ್ವದೇಶಿ ನಾಯಕರು ಆತಂಕ ವ್ಯಕ್ತಪಡಿಸುತ್ತಿರುವ ಹೊತ್ತಲ್ಲೇ, ಅಮೆರಿಕ ಅಧ್ಯಕ್ಷರ ಈ ಪ್ರಶಂಸೆ ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha