Dailyhunt Logo
  • Light mode
    Follow system
    Dark mode
    • Play Story
    • App Story
Cardiology | ನಿಮ್ಮ ಹೃದಯದ ಸ್ನಾಯು ದಪ್ಪಗಾಗಿದ್ಯಾ? ವರ್ಕೌಟ್ ಮಾಡುವ ಮುನ್ನ ತಿಳಿಯಲೇಬೇಕಾದ ಸತ್ಯ

Cardiology | ನಿಮ್ಮ ಹೃದಯದ ಸ್ನಾಯು ದಪ್ಪಗಾಗಿದ್ಯಾ? ವರ್ಕೌಟ್ ಮಾಡುವ ಮುನ್ನ ತಿಳಿಯಲೇಬೇಕಾದ ಸತ್ಯ

Hosadigantha 3 days ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾವು ಪ್ರತಿದಿನ ಜಿಮ್‌ಗೆ ಹೋಗಿ ಕಸರತ್ತು ಮಾಡುತ್ತೇವೆ, ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಏನೆಲ್ಲಾ ಕಷ್ಟಪಡುತ್ತೇವೆ. "ಮಸಲ್ಸ್ ಬೆಳೆದರೆ ದೇಹ ಗಟ್ಟಿ, ಆರೋಗ್ಯ ಸೂಪರ್" ಎಂಬುದು ಬಹುತೇಕರ ನಂಬಿಕೆ. ಆದರೆ, ನಮ್ಮ ದೇಹದ ಅತ್ಯಂತ ಪ್ರಮುಖ ಅಂಗವಾದ ಹೃದಯದ ಸ್ನಾಯುಗಳು ದಪ್ಪಗಾದರೆ ಅಬ್ಬಾ, ಹೃದಯ ಸ್ಟ್ರಾಂಗ್ ಆಯಿತಲ್ಲ ಎಂದು ಸಂಭ್ರಮಿಸುವ ಮುನ್ನ ಎಚ್ಚರ.

ನೀವು ಎಷ್ಟೇ ವರ್ಕೌಟ್ ಮಾಡಿ, ಎಷ್ಟೇ ಫಿಟ್ ಆಗಿದ್ದರೂ ಸರಿ… ಹೃದಯದ ಸ್ನಾಯು ದಪ್ಪಗಾಗುವುದು ಎಂದಿಗೂ ಒಳ್ಳೆಯ ಲಕ್ಷಣವಲ್ಲ.

ನಾವು ಕೈ-ಕಾಲುಗಳ ವ್ಯಾಯಾಮ ಮಾಡಿದಾಗ ಆ ಸ್ನಾಯುಗಳು ಬೆಳೆಯುವುದು ಒಳ್ಳೆಯದೇ. ಆದರೆ ಹೃದಯ ಒಂದು ವಿಶಿಷ್ಟವಾದ ರಕ್ತ ಪಂಪ್ ಮಾಡುವ ಅಂಗ. ಹೃದಯದ ಎಡಭಾಗದ ಕೆಳ ಭಾಗ ಇಡೀ ದೇಹಕ್ಕೆ ರಕ್ತವನ್ನು ಸರಬರಾಜು ಮಾಡುತ್ತದೆ. ಯಾವುದೋ ಒತ್ತಡದಿಂದಾಗಿ ಈ ಸ್ನಾಯು ದಪ್ಪಗಾಗಲು ಪ್ರಾರಂಭಿಸಿದರೆ, ಅದನ್ನು ವೈದ್ಯಕೀಯ ಭಾಷೆಯಲ್ಲಿ 'ಲೆಫ್ಟ್ ವೆಂಟ್ರಿಕುಲರ್ ಹೈಪರ್ಟ್ರೋಫಿ' ಎನ್ನಲಾಗುತ್ತದೆ.

ಹೃದಯದ ಸ್ನಾಯು ದಪ್ಪಗಾದ ತಕ್ಷಣ ಅದು ಹೆಚ್ಚು ಬಲಶಾಲಿಯಾಯಿತು ಎಂದರ್ಥವಲ್ಲ ಬದಲಿಗೆ, ಅದು ತನ್ನ ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಂಡು ಗಟ್ಟಿಯಾಗುತ್ತದೆ. ಇದರಿಂದ ಹೃದಯಕ್ಕೆ ಸರಿಯಾಗಿ ರಕ್ತವನ್ನು ತುಂಬಿಸಿಕೊಳ್ಳಲು ಮತ್ತು ಪಂಪ್ ಮಾಡಲು ಸಾಧ್ಯವಾಗುವುದಿಲ್ಲ.

ಕಾರಣಗಳೇನು?

ರಕ್ತನಾಳಗಳಲ್ಲಿ ಒತ್ತಡ ಹೆಚ್ಚಿದ್ದಾಗ, ಹೃದಯವು ರಕ್ತವನ್ನು ತಳ್ಳಲು ಎರಡರಷ್ಟು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಹೀಗೆ ಸತತವಾಗಿ ಹೆಚ್ಚು ಶ್ರಮಹಾಕಿದಾಗ ಹೃದಯದ ಸ್ನಾಯು ದಪ್ಪಗಾಗುತ್ತದೆ.

ಅತಿಯಾದ ವೇಟ್‌ಲಿಫ್ಟಿಂಗ್ ಅಥವಾ ವಿಪರೀತ ಸ್ಟ್ರೇನ್ ನೀಡುವ ವರ್ಕೌಟ್‌ಗಳನ್ನು ಸೂಕ್ತ ಮಾರ್ಗದರ್ಶನವಿಲ್ಲದೆ ಮಾಡಿದಾಗ ಹೃದಯದ ಮೇಲೆ ತೀವ್ರ ಒತ್ತಡ ಬೀಳುತ್ತದೆ.

ರಕ್ತ ಹೊರಹೋಗುವ ಕವಾಟ ಕಿರಿದಾಗಿದ್ದಾಗ ಹೃದಯ ಬಲವಂತವಾಗಿ ರಕ್ತವನ್ನು ತಳ್ಳಬೇಕಾಗುತ್ತದೆ.

ಲಕ್ಷಣಗಳೇನು?

ಸಣ್ಣ ಕೆಲಸ ಮಾಡಿದರೂ ವಿಪರೀತ ಆಯಾಸ ಮತ್ತು ಉಸಿರಾಟದ ತೊಂದರೆ.

ಎದೆಭಾರ ಅಥವಾ ಎದೆನೋವು.

ತಲೆಸುತ್ತು, ಏಕಾಏಕಿ ಪ್ರಜ್ಞೆ ತಪ್ಪಿ ಬೀಳುವುದು.

ಎದೆಬಡಿತದಲ್ಲಿ ಏರಿಳಿತ.

ಹೃದಯದ ಸ್ನಾಯು ಅತಿಯಾಗಿ ದಪ್ಪಗಾದರೆ ಮುಂದೆ ಹೃದಯಾಘಾತ, ಹೃದಯ ಸ್ತಂಭನ ಅಥವಾ ಯುವಜನರಲ್ಲಿ ದಿಢೀರ್ ಸಾವು ಸಂಭವಿಸುವ ಅಪಾಯವಿರುತ್ತದೆ. ಕ್ರೀಡಾಪಟುಗಳು ಅಥವಾ ಜಿಮ್‌ನಲ್ಲಿ ಕಸರತ್ತು ಮಾಡುವವರು ಹಠಾತ್ತಾಗಿ ಕುಸಿದುಬಿದ್ದು ಸಾಯಲು ಇದು ಕೂಡ ಒಂದು ಪ್ರಮುಖ ಕಾರಣ.

ವ್ಯಾಯಾಮ ಮಾಡುವುದು ದೇಹಕ್ಕೆ ಒಳ್ಳೆಯದೇ, ಆದರೆ ಅದು ನಿಯಮಿತವಾಗಿರಲಿ. ನಿಮ್ಮ ದೇಹದ ಒಳಗೆ ಮಿಡಿಯುವ ಹೃದಯದ ಮೇಲೂ ಗಮನವಿರಲಿ. ದಪ್ಪಗಾದ ಬೈಸೆಪ್ಸ್ ಚೆಂದ, ಆದರೆ ಹೃದಯದ ಸ್ನಾಯು ದಪ್ಪಗಾದರೆ ಸಾವಿಗೆ ಆಹ್ವಾನ ಎಂಬುದನ್ನು ಎಂದಿಗೂ ಮರೆಯದಿರಿ.

Dailyhunt
Disclaimer: This content has not been generated, created or edited by Dailyhunt. Publisher: Hosadigantha