ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯ ನಡುವೆಯೇ ಚಂಡೀಗಢದ ಇಂಡಸ್ಟ್ರಿಯಲ್ ಏರಿಯಾ ಫೇಸ್-2ರಲ್ಲಿ ಎರಡು ಮಹಡಿ ಕಟ್ಟಡ ಕುಸಿದು ಭಾರೀ ಅವಘಡ ಸಂಭವಿಸಿದೆ. ಕಟ್ಟಡದೊಳಗೆ ಕೆಲಸ ಮಾಡುತ್ತಿದ್ದ ಆರು ಕಾರ್ಮಿಕರಲ್ಲಿ ನಾಲ್ವರನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ನಾಲ್ವರಿಗೆ ರಕ್ಷಣೆ
ಅವಶೇಷಗಳಡಿ ಸಿಲುಕಿದ್ದ ನಾಲ್ವರನ್ನು ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಹಾಗೂ ಪೊಲೀಸರು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ 250ನೇ ಸ್ವಾತಂತ್ರ್ಯ ದಿನ: ಸಮಸ್ತ ಭಾರತೀಯರ ಪರವಾಗಿ ಪ್ರಧಾನಿ ಮೋದಿಯಿಂದ ಶುಭಾಶಯ
ಕಾಂಕ್ರೀಟ್ ಅವಶೇಷಗಳಡಿ ಸಿಲುಕಿರುವ ಇನ್ನಿಬ್ಬರನ್ನು ರಕ್ಷಿಸಲು ವಿಶೇಷ ಉಪಕರಣಗಳ ಸಹಾಯದಿಂದ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳದಲ್ಲಿ ವೈದ್ಯಕೀಯ ತಂಡವೂ ಸಜ್ಜುಗೊಂಡಿದೆ.
ಮಳೆಯೇ ಕಾರಣ ಎಂಬ ಶಂಕೆ
ನಿರಂತರ ಮಳೆಯಿಂದ ಕಟ್ಟಡದ ಬಲ ಕುಂದಿದ್ದೇ ಕುಸಿತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಮಳೆಗಾಲದಲ್ಲಿ ನವೀಕರಣ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಅಗತ್ಯವಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಸೌರಭ್ ಜೋಶಿ ತಿಳಿಸಿದ್ದಾರೆ.

