Dailyhunt
ಎತ್ತಿನಹೊಳೆಗೆ ಕೇಂದ್ರದ ಗ್ರೀನ್ ಸಿಗ್ನಲ್: 34 ಕಠಿಣ ಷರತ್ತುಗಳೊಂದಿಗೆ ಅರಣ್ಯ ಭೂಮಿ ಬಳಕೆಗೆ ಅನುಮೋದನೆ

ಎತ್ತಿನಹೊಳೆಗೆ ಕೇಂದ್ರದ ಗ್ರೀನ್ ಸಿಗ್ನಲ್: 34 ಕಠಿಣ ಷರತ್ತುಗಳೊಂದಿಗೆ ಅರಣ್ಯ ಭೂಮಿ ಬಳಕೆಗೆ ಅನುಮೋದನೆ

Hosadigantha 2 weeks ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಕಗಳ ಕಾಲದ ನಿರೀಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಗೆ ಎದುರಾಗಿದ್ದ ದೊಡ್ಡ ವಿಘ್ನವೊಂದು ನಿವಾರಣೆಯಾಗಿದೆ. ಹಾಸನ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯ 277 ಎಕರೆ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು 34 ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ತಾತ್ವಿಕ ಅನುಮೋದನೆ ನೀಡಿದೆ.

ಇದರಿಂದಾಗಿ ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಈಗ ಮತ್ತೆ ವೇಗ ಸಿಗಲಿದೆ.

ಕೇಂದ್ರ ಸರ್ಕಾರವು ಈ ಅನುಮೋದನೆಯ ಜೊತೆಗೆ ಕೆಲವು ಕಠಿಣ ನಿರ್ದೇಶನಗಳನ್ನು ನೀಡಿದೆ. ಈ ಹಿಂದೆ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಾಮಗಾರಿ ನಡೆಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಮತ್ತು ಅರಣ್ಯ ನಾಶದ ಮೌಲ್ಯದ ಆರು ಪಟ್ಟು ದಂಡವನ್ನು ಪಾವತಿಸಬೇಕು ಎಂದು ಸೂಚಿಸಿದೆ.

ಮುಖ್ಯ ಷರತ್ತುಗಳು:

ಬಳಕೆ ಮಾಡಿಕೊಳ್ಳುವ ಅರಣ್ಯ ಭೂಮಿಗೆ ಸಮನಾದ ಅರಣ್ಯೇತರ ಭೂಮಿಯಲ್ಲಿ ಗಿಡಗಳನ್ನು ಬೆಳೆಸಬೇಕು. ಈ ಭೂಮಿಯನ್ನು ಅರಣ್ಯ ಇಲಾಖೆಯ ಹೆಸರಿಗೆ ವರ್ಗಾಯಿಸಿ, ಅದನ್ನು 'ಸಂರಕ್ಷಿತ ಅರಣ್ಯ' ಎಂದು ಘೋಷಿಸಬೇಕು.

ಮರಗಳನ್ನು ಬೆಳೆಸುವ ಮತ್ತು 10 ವರ್ಷಗಳ ಕಾಲ ನಿರ್ವಹಿಸುವ ವೆಚ್ಚವನ್ನು 'ಕ್ಯಾಂಪಾ' (CAMPA) ಖಾತೆಗೆ ಆನ್‌ಲೈನ್ ಮೂಲಕ ಜಮಾ ಮಾಡಬೇಕು.

ಅರಣ್ಯ ವ್ಯಾಪ್ತಿಯಲ್ಲಿ ಕಾರ್ಮಿಕರ ಶಿಬಿರಗಳನ್ನು ಸ್ಥಾಪಿಸುವಂತಿಲ್ಲ ಮತ್ತು ಹೊಸ ರಸ್ತೆಗಳನ್ನು ನಿರ್ಮಿಸುವಂತಿಲ್ಲ. ವನ್ಯಜೀವಿಗಳಿಗೆ ಮತ್ತು ಸಸ್ಯಸಂಕುಲಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸಬೇಕು.

ಒಟ್ಟು 111.02 ಹೆಕ್ಟೇರ್ ಪ್ರದೇಶವನ್ನು ಮಾತ್ರ ಬಳಸಿಕೊಳ್ಳಬೇಕು. ಮರಗಳನ್ನು ಕಡಿಯುವುದು ಅನಿವಾರ್ಯವಾದರೆ ಮಾತ್ರ ಅರಣ್ಯ ಇಲಾಖೆಯ ಸಮ್ಮುಖದಲ್ಲಿ ನಡೆಸಬೇಕು.

ಯಾವುದೇ ಷರತ್ತು ಉಲ್ಲಂಘನೆಯಾದಲ್ಲಿ 1980ರ ಅರಣ್ಯ ಸಂರಕ್ಷಣಾ ಕಾಯಿದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಎಚ್ಚರಿಸಿದೆ. ಪ್ರತಿ ವರ್ಷ ಡಿಸೆಂಬರ್ ಅಂತ್ಯಕ್ಕೆ ರಾಜ್ಯ ಸರ್ಕಾರವು ಈ ಕುರಿತು ವರದಿ ಸಲ್ಲಿಸುವುದು ಕಡ್ಡಾಯವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha