Dailyhunt Logo
  • Light mode
    Follow system
    Dark mode
    • Play Story
    • App Story
ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಬೆಳಗಾವಿ ಜಿಲ್ಲೆಯ 7 ನದಿಗಳು ಜಲಾವೃತ, 16ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತ

ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಬೆಳಗಾವಿ ಜಿಲ್ಲೆಯ 7 ನದಿಗಳು ಜಲಾವೃತ, 16ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತ

Hosadigantha 1 week ago

ಹೊಸದಿಗಂತ ಬೆಳಗಾವಿ ವರದಿ:

ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಕಳೆದ ಆರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮುಂಗಾರು ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕೃಷ್ಣಾ ಸೇರಿದಂತೆ ಜಿಲ್ಲೆಯ ಪ್ರಮುಖ ನದಿಗಳಿಗೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯ 16ಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

8 ಕೆಳಹಂತದ ಸೇತುವೆಗಳು ಜಲಾವೃತ:

ನದೀಪಾತ್ರದಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 8 ಪ್ರಮುಖ ಕೆಳಹಂತದ ಸೇತುವೆಗಳು ನೀರಿನಲ್ಲಿ ಮುಳುಗಿವೆ. ಮುಲ್ಲಾಂಕಿ-ದತ್ತವಾಡ, ಕಾರದಗಾ-ಬೋಜ್, ಅಕ್ಕೋಳ-ಸಿದ್ನಾಳ, ಜತ್ರಾಟ್-ಭೀವಶಿ, ಬಾರವಾಡ-ಕನ್ನೂರ ಹಾಗೂ ಬೋಜವಾಡಿ-ಗಜವರವಾಡಿ ಸೇರಿದಂತೆ ಹಲವು ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ. ಇದರಿಂದಾಗಿ ಈ ಭಾಗದ 16ಕ್ಕೂ ಹೆಚ್ಚು ಗ್ರಾಮಗಳ ನಡುವಿನ ನೇರ ಸಂಪರ್ಕ ಕಡಿತಗೊಂಡಿದ್ದು, ಜನರು ದೈನಂದಿನ ಸಂಚಾರಕ್ಕಾಗಿ ಕಿಲೋಮೀಟರ್ಗಟ್ಟಲೆ ಬಳಸಿ ಪರ್ಯಾಯ ಮಾರ್ಗಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ನದಿಗಳಿಗೆ ಹರಿದುಬಂತು 1 ಲಕ್ಷ ಕ್ಯೂಸೆಕ್ ನೀರು:

ಕರ್ನಾಟಕದ ಗಡಿಯೊಳಗೆ ಸದ್ಯ ಒಟ್ಟು 98 ಸಾವಿರದಿಂದ 1 ಲಕ್ಷ ಕ್ಯೂಸೆಕ್ಗೂ ಅಧಿಕ ಪ್ರಮಾಣದ ನೀರಿನ ಒಳಹರಿವು ದಾಖಲಾಗಿದೆ. ಕಳೆದ ಒಂದೇ ರಾತ್ರಿಯಲ್ಲಿ ಕೃಷ್ಣಾ ನದಿಗೆ ಹೆಚ್ಚುವರಿಯಾಗಿ 28 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ. ಸದ್ಯ ಜಿಲ್ಲೆಯ ಕೃಷ್ಣಾ, ದೂದಗಂಗಾ, ವೇದಗಂಗಾ, ಹಿರಣ್ಯಕೇಶಿ, ಘಟಪ್ರಭಾ, ಮಲಪ್ರಭಾ ಹಾಗೂ ಮಾರ್ಕಂಡೇಯ ಸೇರಿ ಒಟ್ಟು ಏಳು ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ.

ದೂರಾದ ಬರಗಾಲದ ಭೀತಿ: ರಾಜ್ಯಾದ್ಯಂತ ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಒತ್ತಾಯ!

ಗದ್ದೆಗಳಿಗೆ ನುಗ್ಗಿದ ನೀರು ರೈತರಿಗೆ ಅಪಾರ ನಷ್ಟ:

ದೂದಗಂಗಾ ನದಿಯು ಉಕ್ಕಿ ಹರಿಯುತ್ತಿರುವುದರಿಂದ ನದಿ ಪಾತ್ರದ ಪಕ್ಕದಲ್ಲಿರುವ ನೂರಾರು ಎಕರೆ ಕೃಷಿ ಭೂಮಿಗೆ ಪ್ರವಾಹದ ನೀರು ನುಗ್ಗಿದೆ. ನಿಪ್ಪಾಣಿ ತಾಲೂಕಿನ ಶಿರದವಾಡ ಗ್ರಾಮದ ಸುತ್ತಮುತ್ತಲಿನ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿದ್ದು, ರೈತರು ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಸ್ಥಿತಿಯಲ್ಲಿದ್ದಾರೆ.

ಇತ್ತೀಚೆಗಷ್ಟೇ ಬಿತ್ತನೆ ಮಾಡಲಾಗಿದ್ದ ಜೋಳ, ಉದ್ದು ಹಾಗೂ ಸೊಯಾಬೀನ್ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದ್ದು, ಕೊಳೆಯುವ ಭೀತಿ ಎದುರಾಗಿದೆ. ಇಷ್ಟು ದಿನ ಮಳೆಗಾಗಿ ಕಾಯುತ್ತಿದ್ದ ರೈತರಿಗೆ, ಈಗ ಅತಿಯಾದ ನೀರು ನುಗ್ಗಿರುವುದರಿಂದ ಭಾರೀ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ನದಿ ತೀರದ ನಿವಾಸಿಗಳು ಜಾಗರೂಕರಾಗಿರುವಂತೆ ಜಿಲ್ಲಾಡಳಿತ ಈಗಾಗಲೇ ಮುನ್ನೆಚ್ಚರಿಕೆ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha