Dailyhunt Logo
  • Light mode
    Follow system
    Dark mode
    • Play Story
    • App Story
ಮಳೆಗಾಲದಲ್ಲಿ ಮಕ್ಕಳನ್ನು ಕಾಡುವ ಒಣಕೆಮ್ಮಿನ ಲಕ್ಷಣಗಳೇನು? ಆಯುರ್ವೇದದ ಪರಿಹಾರ ಏನು?

ಮಳೆಗಾಲದಲ್ಲಿ ಮಕ್ಕಳನ್ನು ಕಾಡುವ ಒಣಕೆಮ್ಮಿನ ಲಕ್ಷಣಗಳೇನು? ಆಯುರ್ವೇದದ ಪರಿಹಾರ ಏನು?

Hosadigantha 7 hrs ago

ಕ್ಷಿಣಾಭಿಮುಖವಾಗಿ ಚಲಿಸುವ - ಕ್ರಮೇಣ ನಶಿಸುವ- ಸೂರ್ಯನ ಬಲ, ಆಗಷ್ಟೇ ಮುಗಿದ ಬೇಸಿಗೆಗಾಲದ ಬಿಸಿಲಿನ ಬೇಗೆಯ ಬೆನ್ನಲ್ಲೇ ಪ್ರಾರಂಭವಾಗುವ ಮಳೆಗಾಲದ ತಣ್ಣನೆಯ ಹಿಮಭರಿತ ಗಾಳಿ ಹಾಗೂ ಮೋಡ ಕವಿದ ವಾತಾವರಣವು ದೇಹದಲ್ಲಿನ ತೇವಾಂಶವನ್ನು ದೂರೀಕರಿಸುತ್ತದೆ, ಪಚನ ಶಕ್ತಿಯನ್ನು ಕಡಿಮೆಗೊಳಿಸುತ್ತದೆ, ಆಯುರ್ವೇದದ ಪ್ರಕಾರ ವಾತದೋಷವನ್ನು ಹೆಚ್ಚಿಸುತ್ತದೆ.

ಹಾಗಾಗಿ ಅತಿಯಾದ ರಾತ್ರಿನಿದ್ರೆ, ದಿವಾಸ್ವಪ್ನ ( ಹಗಲಿನ ಸಮಯದಲ್ಲಿ ನಿದ್ರಿಸುವುದು), ಅತಿಯಾದ ವ್ಯಾಯಾಮವನ್ನು ಮಾಡುವುದು, ಇವೆಲ್ಲವೂ ಈ ಕಾಲದಲ್ಲಿ ವರ್ಜ್ಯ. ಸಿಹಿ, ಹುಳಿ ಹಾಗೂ ಉಪ್ಪಿನ ಪದಾರ್ಥಗಳನ್ನು ಸೇವಿಸುವುದು ಅಗತ್ಯ. ವ್ಯತ್ಯಾಸಗೊಂಡ ಪಚನಶಕ್ತಿಯನ್ನು ಸಮತೋಲನದಲ್ಲಿಡಲೂ, ವಾತದೋಷವು ದೇಹದಲ್ಲಿ ಸಂಚಯವಾಗದಂತೆ ತಡೆಯಲೂ ಇವು ಸಹಕಾರಿ. ನಮ್ಮ ಹಿರಿಯರ ಅನುಭವ ಅದೆಷ್ಟು ಸಮಂಜಸ, ಪ್ರಾಯೋಗಿಕ ಹಾಗೂ ಅತ್ಯಮೂಲ್ಯ?

ಈಗಿನ ಕಾಲದಲ್ಲಿ ಮಕ್ಕಳು ಅತಿಯಾಗಿ ಸೇವಿಸುವ ಕರಿದ ಪದಾರ್ಥಗಳು, ಐಸ್ ಕ್ರೀಂ-ಜ್ಯೂಸ್-ಮಿಲ್ಕ್ ಶೇಕ್ ನಂತಹ ಅತೀ ತಂಪಿನ ಆಹಾರ ಪದಾರ್ಥಗಳು, ತೇವಾಂಶರಹಿತವಾದ ಒಣ ಆಹಾರಪದಾರ್ಥಗಳು , ಕಾಲಾನುಸಾರವಾಗಿ ಮಲ-ಮೂತ್ರಗಳ ವಿಸರ್ಜನೆ ಮಾಡದಿರುವುದು ಇವೆಲ್ಲವೂ ದೇಹದ ವಾತ ದೋಷವನ್ನು ಹೆಚ್ಚಿಸುತ್ತವೆ. ಕಫ ಸಂಚಯವಾಗಿದ್ದರೂ ಅದನ್ನು ಘನೀಕರಿಸುತ್ತದೆ. ಪರಿಣಾಮವಾಗಿಯೇ, ಸ್ವಾಭಾವಿಕವಾಗಿಯೇ ಅತಿಯಾದ ನಿದ್ರೆ ಅಥವಾ ಚಟುವಟಿಕೆಯಿಂದ ಕೂಡಿರುವ ಮಕ್ಕಳಲ್ಲಿ, ವಿಶೇಷವಾಗಿ ಮಳೆಗಾಲದಲ್ಲಿ, ಒಣಕೆಮ್ಮಿನ ಹಾವಳಿ ಹೆಚ್ಚು.

ಏನಿದರ ಲಕ್ಷಣಗಳು ?

ಆಹಾರದ ಸೇವನೆಯ ನಂತರ, ರಾತ್ರಿ ನಿದ್ರೆಯ ಸಮಯದಲ್ಲಿ, ನೀರಿನಲ್ಲಿ ಈಜಿದ ನಂತರ, ಇತರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಸ್ವಾಭಾವಿಕವಾಗಿಯೇ ಒಣಕೆಮ್ಮಿನ ಹಾವಳಿಯನ್ನು ಕಾಣಬಹುದು. ಒಮ್ಮೆ ಪ್ರಾರಂಭವಾದರೆ ಒಂದೇ ಸಮನೆ ಕೆಮ್ಮುವುದು, ಎದೆ-ಪಾರ್ಶ್ವ-ತಲೆಯಲ್ಲಿ ನೋವು ಕಾಣಿಸಿಕೊಳ್ಳುವುದು, ಕಫ ಉಗುಳಲು ಸಾಧ್ಯವಾಗದಿರುವುದು, ಒಂದೊಮ್ಮೆ ಉಗುಳಿದರೆ ರಕ್ತ ಕಾಣಿಸಿಕೊಳ್ಳುವುದು, ಸ್ವರದಲ್ಲಿ ವ್ಯತ್ಯಾಸ (ಒಡಕುಸ್ವರ), ಪಾರಿವಾಳದ ಸ್ವರದಂತೆ ಗುಂಯ್ ಗುಡುತ್ತಾ ಉಸಿರಾಟದ ತೊಂದರೆಯನ್ನು ತೋರ್ಪಡಿಸುವುದು, ಬಾಯಿ ಒಣಗುವುದು, ಅತಿಯಾದ ಸುಸ್ತು, ಮೂರ್ಛೆ ತಪ್ಪುವುದು - ಹೀಗೆ ಹಂತಹಂತವಾಗಿಯೇ ತೀವ್ರತರವಾದ ಲಕ್ಷಣಗಳು ಕಂಡುಬರುತ್ತವೆ.

ರಾತ್ರಿಯಿಡೀ ಮಲಗದಿರುವ ಮಗುವು ಹಗಲಿನ ಸಮಯದಲ್ಲಿ ಮಲಗುವುದು, ಆಹಾರಸೇವನೆಯನ್ನೇ ಮಾಡಲು ಒಪ್ಪದಿರುವ ಕಾರಣ ಪುನಃ ಪಚನ ಶಕ್ತಿ ಹಾಗೂ ದೇಹದ ವ್ಯಾಧಿಕ್ಷಮತೆಯು ದುರ್ಬಲಗೊಳ್ಳುತ್ತವೆ. ದೈಹಿಕ ಕ್ಷಮತೆಯನ್ನು ಕಳೆದುಕೊಂಡ ಮಗುವು ಜ್ವರದಿಂದ ಬಳಲುವುದು, ದೇಹದ ತೂಕ ಕಳೆದುಕೊಳ್ಳುವುದು, ಶೈಕ್ಷಣಿಕ ಅವಧಿಗಳಲ್ಲೂ ಗೈರುಹಾಜರಿಯನ್ನು ತೋರ್ಪಡಿಸುವುದು. ಕೆಲವೊಮ್ಮೆ ಈ ಎಲ್ಲಾ ಲಕ್ಷಣಗಳಿಗೆ ಸಕಾಲಿಕ ಚಿಕಿತ್ಸೆಯು ದೊರಕದೇ ಅಸ್ತಮಾ, ಕ್ಷಯ ರೋಗಗಳಾಗಿ ಮಾರ್ಪಡುತ್ತವೆ. ಹಾಗಾಗಿ ಆಹಾರದ ರೂಪದಲ್ಲೂ, ಔಷಧಿಗಳ ಉಪಯೋಗದಿಂದವೂ ತ್ವರಿತವಾಗಿ ಚಿಕಿತ್ಸೆಯನ್ನು ಪಡೆಯಬೇಕು.

ಪರಿಹಾರೋಪಾಯಗಳು:

  • ಮಧುರ (ಸಿಹಿ), ಅಮ್ಲ (ಹುಳಿ) ಹಾಗೂ ಲವಣ (ಉಪ್ಪು) ರಸಭರಿತ ಆಹಾರಗಳ ಉಪಯೋಗವನ್ನು ಮಾಡುವುದು - ದಿನದಲ್ಲಿ ಎರಡು ಮೂರು ಬಾರಿ ಕೆಂಪು ಕಲ್ಲು ಸಕ್ಕರೆಯ ಸೇವನೆ, ಘನ ಪದಾರ್ಥಗಳನ್ನು ಸೇವಿಸಲು ಸಾಧ್ಯವಾಗದಿದ್ದಲ್ಲಿ - ಚಿಟಿಕೆ ಉಪ್ಪು ಹಾಗೂ ಏಲಕ್ಕಿ ಪುಡಿಯನ್ನು ಬಳಸಿ ಲಿಂಬುರಸ ಅಥವಾ ಬೆಚ್ಚನೆಯ ಪಾನೀಯಗಳನ್ನು ಸೇವಿಸುವುದು, ಅತಿಯಾದ ಒಣಕೆಮ್ಮಿನ ಸಮಯದಲ್ಲಿ ಲವಂಗ ಹಾಗೂ ಒಂದೆರಡು ಕಲ್ಲುಪ್ಪಿನ ಮಿಶ್ರಣವನ್ನು ಬಾಯಿಯಲ್ಲಿ ಇರಿಸಿಕೊಳ್ಳುವುದು, ಬಿಸಿಯಾದ ನೀರು ಅಥವಾ ಹಾಲಿಗೆ ಒಂದು ಬಿಂದುವಿನಷ್ಟು ತುಪ್ಪವನ್ನು ಹಾಕಿ ಸೇವಿಸಲು ನೀಡುವುದು.
  • ಫ್ರಿಡ್ಜ್ ನಲ್ಲಿಟ್ಟ ಅಥವಾ ಅತಿ ಶೀತಯುತ ಆಹಾರ ಸೇವನೆ, ಸದಾ ಆರೋಗ್ಯವನ್ನೇ ದಯಪಾಲಿಸುತ್ತವೆ ಎಂದು ನಂಬಲಾದ ಬಾದಾಮಿ-ಗೋಡಂಬಿ-ಪಿಸ್ತಾ- ವಾಲ್ ನಟ್ - ಖರ್ಜೂರಗಳ ಅತಿಸೇವನೆ ಸಲ್ಲದು
  • ಪ್ರಯಾಣಿಸುವಾಗ ಕಿವಿಗಳನ್ನು ಮುಚ್ಚುವ ಸಲಕರಣೆಗಳನ್ನು ಬಳಸುವುದು (ಕಿವಿ ಹಾಗೂ ಗಂಟಲಿನ ಸಾಮಾನ್ಯ ದ್ವಾರವಾದ ಯೂಶ್ಟೇಷಿಯನ್ ಟ್ಯೂಬ್ ಎಂಬ ನಾಳದ ಸೋಂಕನ್ನು ತಪ್ಪಿಸಲು), ಹವಾನಿಯಂತ್ರಿತ ವಾತಾವರಣದಿಂದ ಸಾಧ್ಯವಾದಷ್ಟು ಮಕ್ಕಳನ್ನು ದೂರವಿರಿಸುವುದು, ಮಲಗುವಾಗ ಮಗುವಿನ ತಲೆ, ಕುತ್ತಿಗೆ ಹಾಗೂ ಎದೆಯ ಭಾಗಗಳನ್ನು ಉಳಿದ ದೇಹದ ಭಾಗಗಳ ಮಟ್ಟದಿಂದ ಎತ್ತರದಲ್ಲಿಡುವುದು (ಹೆಡ್ ಎಂಡ್ ರೈಸ್)
  • ಆಯುರ್ವೇದೋಕ್ತ ಔಷಧಗಳು: ಕಾರಣ - ಲಕ್ಷಣಗಳಿಗನುಸಾರವಾಗಿ ಕಂಟಕಾರಿ ಘೃತ, ತುಳಸಿ ಕಂಟಕಾರಿ, ನಯೋಪಯಂ ಕಷಾಯ, ಪುಷ್ಕರಮೂಲಾಸವ, ಕನಕಾಸವಗಳೇ ಮೊದಲಾದ ಶಾಸ್ತ್ರೋಕ್ತ ಔಷಧಿಗಳನ್ನು ವೈದ್ಯಕೀಯ ಸಲಹೆಯ ಮೇರೆಗೆ ಸೇವಿಸಬೇಕು.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು ?

ಮೇಲೆ ತಿಳಿಸಿದ ಮನೆ ಮದ್ದುಗಳ ಉಪಯೋಗದಿಂದ ಮಕ್ಕಳಲ್ಲಿ ಸಾಮಾನ್ಯವಾಗಿ ಎರಡು ರೀತಿಯ ಬದಲಾವಣೆಗಳಾಗುತ್ತವೆ. ಮೊದಲನೆಯದಾಗಿ, ದೇಹದಲ್ಲಿ ಉಸಿರಾಟಕ್ಕೆ ನೆರವಾಗುವ ನಾಳಗಳು ಸ್ನಿಗ್ಧತೆಯನ್ನು ಹೊಂದಿ , ಅತಿಯಾದ ಎದೆ-ಪಾರ್ಶ್ವಗಳ ನೋವು ಕಡಿಮೆಯಾಗುವುದು. ಎರಡನೆಯದಾಗಿ, ಘನೀಕರಿಸಿದ್ದ ಕಫವು ದ್ರವೀಕರಿಸಿ, ಒಣಕೆಮ್ಮದ ಲಕ್ಷಣಗಳು ಕಫಯುಕ್ತ ಕೆಮ್ಮದ ಲಕ್ಷಣಗಳಾಗಿ ಮಾರ್ಪಾಡುಹೊಂದುತ್ತವೆ. ಮಗುವು ವಾಂತಿ ರೂಪದಲ್ಲಿಯೋ, ಮಲದಲ್ಲಿ ಕಫದ ವಿಸರ್ಜನೆಯ ರೂಪದಲ್ಲೋ - ಲಕ್ಷಣಗಳಿಂದ ಹೊರಬರುತ್ತದೆ. ಇವೆರಡು ಸಂದರ್ಭಗಳ ಹೊರತಾಗಿ ಮಗುವು ಅತಿಯಾದ ರಕ್ತಭರಿತ ಒಣಕೆಮ್ಮಿನ ಲಕ್ಷಣಗಳನ್ನು ತೋರ್ಪಡಿಸಿದರೆ, ಕಫಭರಿತ ಕೆಮ್ಮಿನ ಲಕ್ಷಣಗಳು 2-3 ದಿನಗಳಲ್ಲಿಯೂ ಕಡಿಮೆಯಾಗದಿದ್ದರೆ, ಜ್ವರದ ತೀವ್ರತೆ ಹೆಚ್ಚಾದರೆ (ನ್ಯುಮೋನಿಯಾ ವ್ಯಾಧಿಯಾಗಿ ಮಾರ್ಪಾಡಾದರೆ), ಮಗುವು ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಿಸಲೂ ಅಸಮರ್ಥವಾದರೆ ತ್ವರಿತ ರಕ್ತ ಹಾಗೂ ಇತರ ಪರೀಕ್ಷೆಗಳ ಮುಖಾಂತರ ಸಮಯೋಚಿತ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಲೇಬೇಕು.

ಮಾಹಿತಿಗಾಗಿ ಸಂಪರ್ಕಿಸಿ:
ಡಾ. ಕಾವ್ಯ

ಸಹಾಯಕ ಪ್ರಾಧ್ಯಾಪಕರು
ಬಾಲರೋಗ ವಿಭಾಗ
ಎಸ್ ಡಿ ಎಮ್ ಆಯುರ್ವೇದ ಕಾಲೇಜು ಉಡುಪಿ
ಒಪಿಡಿ ದಿನ: ಶನಿವಾರ

Dailyhunt
Disclaimer: This content has not been generated, created or edited by Dailyhunt. Publisher: Hosadigantha