ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಗ್ರಾಮಗಳಲ್ಲಿ ಅಳವಡಿಸಿದ್ದ ಬೀದಿ ದೀಪಗಳನ್ನು ತೆರವುಗೊಳಿಸಿರುವ ಘಟನೆ ರಾಜಸ್ಥಾನದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ಅಭ್ಯರ್ಥಿಯ ಸೋಲಿನ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಇದು ರಾಜಕೀಯ ಸೇಡಿನ ಕ್ರಮವೇ ಎಂಬ ಪ್ರಶ್ನೆಗಳು ಎದ್ದಿವೆ.
ಆದರೆ, ವಿದ್ಯುತ್ ಇಲಾಖೆಯ ಅಧಿಕಾರಿಗಳು ದೀಪಗಳನ್ನು ಅಕ್ರಮ ವಿದ್ಯುತ್ ಸಂಪರ್ಕದ ಮೂಲಕ ಅಳವಡಿಸಲಾಗಿತ್ತು ಎಂದು ಹೇಳಿದ್ದಾರೆ.
ರಾಜಸ್ಥಾನದ ಟೋಂಕ್ ಜಿಲ್ಲೆಯ ಪೀಪ್ಲು ಪಂಚಾಯತ್ ಸಮಿತಿ ವ್ಯಾಪ್ತಿಯ ವಾರ್ಡ್ 4ರ ರನೋಲಿ ಗ್ರಾಮ ಪಂಚಾಯತ್‌ನ ಕುಂಭಾರೋನ್ ಕಿ ಧಾನಿ, ಬೇಗಂಪುರಾ, ಹನೀಫ್‌ಗಂಜ್ ಹಾಗೂ ಬಿಜಲ್‌ಪುರ ಗ್ರಾಮಗಳಲ್ಲಿ ಸುಮಾರು 50 ಎಲ್‌ಇಡಿ ಬೀದಿ ದೀಪಗಳನ್ನು ವಿದ್ಯುತ್ ಕಂಬಗಳಿಗೆ ಅಳವಡಿಸಲಾಗಿತ್ತು. ಈ ದೀಪಗಳನ್ನು ನಿವಾಯಿ ಶಾಸಕ ರಾಮ್‌ಸಹಾಯ್ ವರ್ಮಾ ಅವರ ಆಪ್ತ ಸಹಾಯಕ ಅಲೋಕ್ ಶರ್ಮಾ ಸೂಚನೆಯ ಮೇರೆಗೆ ಅಳವಡಿಸಲಾಗಿದೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.
ಅಲೋಕ್ ಶರ್ಮಾ ಅವರ ಪತ್ನಿ ಪ್ರಿಯಾಂಕಾ ಶರ್ಮಾ ವಾರ್ಡ್ 4ರಿಂದ ಪಂಚಾಯತ್ ಸಮಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ, ಚುನಾವಣೆಯಲ್ಲಿ ಸೋಲು ಕಂಡಿದ್ದರು. ಫಲಿತಾಂಶ ಪ್ರಕಟವಾದ ಬಳಿಕ ಬೀದಿ ದೀಪಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದ್ದು, ಇದಕ್ಕೆ ಚುನಾವಣಾ ಸೋಲಿನ ಪ್ರತೀಕಾರವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
10 ಕಂಬಗಳಿಂದ ದೀಪ ತೆರವು, ಪ್ರತಿಭಟನೆ
ಜೈಪುರ ವಿದ್ಯುತ್ ವಿತರಣಾ ನಿಗಮದ (JVVNL) ದೋಷ ಸರಿಪಡಿಸುವ ತಂಡ (FRT) ಗ್ರಾಮಗಳಿಗೆ ಭೇಟಿ ನೀಡಿ, ಅನುಮತಿಯಿಲ್ಲದ ವಿದ್ಯುತ್ ಸಂಪರ್ಕದ ಮೂಲಕ ದೀಪಗಳನ್ನು ಅಳವಡಿಸಿರುವುದನ್ನು ಪತ್ತೆಹಚ್ಚಿದೆ ಎನ್ನಲಾಗಿದೆ. ಬಳಿಕ ಕುಂಭಾರೋನ್ ಕಿ ಧಾನಿಯಲ್ಲಿ ಸುಮಾರು 10 ಕಂಬಗಳಲ್ಲಿದ್ದ ದೀಪಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಸ್ಥರ ವಿರೋಧದಿಂದ ಉಳಿದ ದೀಪಗಳ ತೆರವು ಕಾರ್ಯ ಸ್ಥಗಿತಗೊಂಡಿದ್ದು, ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಸರಪಂಚರು ವಿದ್ಯುತ್ ಬಿಲ್ ಪಾವತಿಸುವುದಾಗಿ ಒಪ್ಪಿಕೊಂಡ ಬಳಿಕ ಸುಮಾರು 40 ಕಂಬಗಳ ದೀಪಗಳನ್ನು ತೆರವುಗೊಳಿಸುವುದನ್ನು ನಿಲ್ಲಿಸಲಾಗಿದೆ.

