ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಧನ್ವೀರ್ ಗೌಡ ಮತ್ತು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದು, ಹಣಕಾಸಿನ ವ್ಯವಹಾರ, ಕಾರು ವಾಪಸ್ ನೀಡದಿರುವುದು ಹಾಗೂ ಬೆದರಿಕೆ ಹಾಕಿದ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
5 ಲಕ್ಷ ಮತ್ತು ಕಾರಿನ ವಿಚಾರವಾಗಿ ದೂರು
ಗೌರವ್ ಎಂಬುವವರು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಧನ್ವೀರ್ ಗೌಡ ಮತ್ತು ಶಶಿ ಎಂಬುವವರ ವಿರುದ್ಧ ಆರೋಪ ಮಾಡಿದ್ದಾರೆ. ವಿಮಾನ ಟಿಕೆಟ್ ಬುಕ್ಕಿಂಗ್‌ಗೆ ಸಂಬಂಧಿಸಿದ 5 ಲಕ್ಷ ಹಣವನ್ನು ವಾಪಸ್ ಕೇಳಿದಾಗ ನಿಂದನೆ ಹಾಗೂ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ತಮ್ಮ ವೋಕ್ಸ್‌ವ್ಯಾಗನ್ ಕಾರನ್ನು ಶಶಿ ಅವರಿಗೆ ನೀಡಲಾಗಿದ್ದು, ಅದನ್ನೂ ಹಿಂದಿರುಗಿಸಿಲ್ಲ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.
ಗದಗದಿಂದ ನಾಪತ್ತೆ, ಮುಂಬೈನಲ್ಲಿ ಪತ್ತೆ: 40 ದಿನಗಳ ಬಳಿಕ ಮನೆಗೆ ಮರಳಿದ ಪರ್ವೀಜ್
ವಾಟ್ಸ್‌ಆಯಪ್ ಸಂದೇಶಗಳ ಬಗ್ಗೆಯೂ ಆರೋಪ
ಇನ್ನೊಂದೆಡೆ, ಭೋಜರಾಜ್ ಎಂಬುವವರು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದರ್ಶನ್ ಅವರ ಪಿಎ ನಾಗರಾಜ್ ಅವರ ಮೂಲಕ ಧನ್ವೀರ್ ಅವರ ಮನೆಗೆ ತೆರಳಿದ ಬಳಿಕ, ಧನ್ವೀರ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಮತ್ತು ತಮ್ಮ ಸ್ಥಳದ ಮಾಹಿತಿ ಕೇಳಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ವಾಟ್ಸ್‌ಆಯಪ್ ಮೂಲಕವೂ ಬೆದರಿಕೆ ಸಂದೇಶಗಳು ಬಂದಿವೆ ಎಂದು ತಿಳಿಸಿರುವ ಭೋಜರಾಜ್, ಅವುಗಳನ್ನು ಪೊಲೀಸರಿಗೆ ಒದಗಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಎರಡೂ ಕಡೆಯಿಂದ ದೂರು; ತನಿಖೆ ಮುಂದುವರಿಕೆ
ಈ ನಡುವೆ, ಧನ್ವೀರ್ ಅವರ ತಂದೆ ತಿಮ್ಮೇಗೌಡ ಕೂಡ ವಿಜಯಲಕ್ಷ್ಮಿ, ನಾಗರಾಜ್ ಸೇರಿದಂತೆ ಕೆಲವರ ವಿರುದ್ಧ ಪ್ರತಿ ದೂರು ನೀಡಿದ್ದಾರೆ. ತಮ್ಮ ಮನೆಗೆ ಬಂದು ಬೆದರಿಕೆ ಹಾಕಲಾಗಿದೆ ಎಂಬುದು ಅವರ ಆರೋಪ. ನಾಗರಾಜ್ ಅವರಿಂದಲೂ ಈ ಹಿಂದೆ ದೂರು ದಾಖಲಾಗಿತ್ತು ಎಂದು ವರದಿಯಾಗಿದೆ. ಧನ್ವೀರ್ ಅವರದ್ದು ಎನ್ನಲಾದ ಆಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಒಟ್ಟಿನಲ್ಲಿ, ಎರಡೂ ಕಡೆಯ ಆರೋಪ-ಪ್ರತ್ಯಾರೋಪಗಳ ನಡುವೆ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

