Dailyhunt Logo
  • Light mode
    Follow system
    Dark mode
    • Play Story
    • App Story
ಪ್ರೀತಿಸಿದಾಕೆಯ ರುಂಡ ಕಡಿದು ಬರ್ಬರ ಹ*ತ್ಯೆ ಕೇಸ್: ಅಪರಾಧಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ಪ್ರೀತಿಸಿದಾಕೆಯ ರುಂಡ ಕಡಿದು ಬರ್ಬರ ಹ*ತ್ಯೆ ಕೇಸ್: ಅಪರಾಧಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

Hosadigantha 1 day ago

ಹೊಸದಿಗಂತ ವರದಿ ಮಡಿಕೇರಿ:

ತಾನು ಪ್ರೀತಿಸುತ್ತಿದ್ದ ಅಪ್ರಾಪ್ತ ವಯಸ್ಕ ಬಾಲಕಿಯ ರುಂಡ ಕಡಿದು ಭೀಭತ್ಸವಾಗಿ ಹತ್ಯೆ ಮಾಡಿದ ಆರೋಪಿಗೆ ಇಲ್ಲಿನ ಮೂರನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಮರಣ ದಂಡನೆಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸೋಮವಾರಪೇಟೆ ತಾಲೂಕಿನ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಓಂಕಾರಪ್ಪ ಅಲಿಯಾಸ್ ಪ್ರಕಾಶ್(32)ಎಂಬಾತನೇ ಮರಣ ದಂಡನೆ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ.

ಪ್ರಕರಣದ ಹಿನ್ನೆಲೆ: ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ಗ್ರಾಮದ ಉದಿಯಂಡ ಸುಬ್ರಮಣಿ ಎಂಬವರ 16 ವರ್ಷ ಪ್ರಾಯದ ಪುತ್ರಿ ಸೂರ್ಲಬ್ಬಿ ಸರಕಾರಿ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಈಕೆಯ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಪ್ರೀತಿಸುತ್ತಿದ್ದನಲ್ಲದೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಬಂದ ಬಳಿಕ ಇವರಿಬ್ಬರ ವಿವಾಹ ಮಾಡುವ ಪ್ರಸ್ತಾಪವಾಗಿತ್ತು.

ಆದರೆ ಈಕೆ ಅಪ್ರಾಪ್ತಳಾಗಿದ್ದರಿಂದ ವಿವಾಹ ನಿಶ್ಚಿತಾರ್ಥವಾದ ವಿಷಯ ಅರಿತ ಸಂಬಂಧಿಸಿದ ಇಲಾಖೆಯವರು, ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಈಗಲೇ ಮದುವೆ ಮಾಡುವುದು ಬೇಡ ಎಂದು ಪೋಷಕರ ಮನ ಒಲಿಸಿದ್ದರು. ಈ ಹಿನ್ನೆಲೆಯಲ್ಲಿ ಈಗಲೇ ಮದುವೆ ಬೇಡ, ಮುಂದೆ ನೋಡುವ ಎಂದು ಮನೆಯವರು ಓಂಕಾರಪ್ಪನಿಗೂ ತಿಳಿಸಿದ್ದರು.

ಇದರಿಂದ ಆಕ್ರೋಶಗೊಂಡಿದ್ದ ಓಂಕಾರಪ್ಪ, 2024ರ ಮೇ 9ರಂದು ರಾತ್ರಿ ಬಾಲಕಿಯ ತಾಯಿಯೊಂದಿಗೆ ಜಗಳವಾಡಿ, ಆಕೆಯ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಬಾಲಕಿಯನ್ನು ಮನೆಯಿಂದ 200 ಮೀ. ದೂರಕ್ಕೆ ಎಳೆದೊಯ್ದು ಕತ್ತಿಯಿಂದ ರುಂಡ ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿದ್ದ.

ನಂತರ ಬಾಲಕಿಯ ತಲೆಯನ್ನು ಹೊತ್ತೊಯ್ದು ಸಮೀಪದ ಕಾಡಿನಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದ. ಕೃತ್ಯ ನಡೆದ ಎರಡು ದಿನಗಳ ಬಳಿಕ ಓಕಾರಪ್ಪನನ್ನು ಬಂಧಿಸಿದ ಸೋಮವಾರಪೇಟೆ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂದಿನ ಸರ್ಕಲ್ ಇನ್ಸ್ ಪೆಕ್ಟರ್ ವಸಂತ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ಮೂರನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ.ಸುರೇಂದ್ರ ಅವರು, ಆರೋಪಿ ಓಕಾರಪ್ಪ ಎಸಗಿದ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ನ.13ರಂದು ಘೋಷಿಸಿ, ಶಿಕ್ಷೆಯ ಪ್ರಮಾಣವನ್ನು ನ.19ರಂದು ಪ್ರಕಟಿಸುವುದಾಗಿ ತಿಳಿಸಿದ್ದರು.

ಇದೀಗ ಶನಿವಾರ ಅಂತಿಮ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ಅಪರಾಧಿ ಓಕಾರಪ್ಪನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರುದ್ರಪ್ರಸನ್ನ ವಾದ ಮಂಡಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Hosadigantha