Dailyhunt Logo
  • Light mode
    Follow system
    Dark mode
    • Play Story
    • App Story
ವೇಗದ ಕ್ರಾಂತಿಗೆ ಭಾರತ ಸಜ್ಜು: 2027ರಲ್ಲಿ ಹಳಿಗಿಳಿಯಲಿದೆ ದೇಶೀ ನಿರ್ಮಿತ ಬುಲೆಟ್ ರೈಲು!

ವೇಗದ ಕ್ರಾಂತಿಗೆ ಭಾರತ ಸಜ್ಜು: 2027ರಲ್ಲಿ ಹಳಿಗಿಳಿಯಲಿದೆ ದೇಶೀ ನಿರ್ಮಿತ ಬುಲೆಟ್ ರೈಲು!

Hosadigantha 1 day ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯರ ಬಹುದಿನಗಳ ಕನಸಾದ ದೇಶದ ಮೊದಲ ಅತಿವೇಗದ ಬುಲೆಟ್ ರೈಲು ಯೋಜನೆಯು ಇದೀಗ ನಿರ್ಣಾಯಕ ಹಂತ ತಲುಪಿದೆ. 2027ರಲ್ಲಿ ದೇಶದ ಮೊದಲ ಬುಲೆಟ್ ರೈಲು ಸೇವೆ ಅಧಿಕೃತವಾಗಿ ಆರಂಭವಾಗಲಿದ್ದು, ಮೊದಲ ಹಂತದಲ್ಲಿ ಗುಜರಾತ್‌ನ ಸೂರತ್ ಮತ್ತು ವಾಪಿ ನಡುವೆ ರೈಲು ಸಂಚರಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ತಮ್ಮ 'ಸಬ್‌ಸ್ಟಾಕ್' ಬರಹದಲ್ಲಿ ಯೋಜನೆಯ ಪ್ರಗತಿಯನ್ನು ಹಂಚಿಕೊಂಡಿರುವ ಸಚಿವರು, ಮುಂಬೈವರೆಗಿನ ಪೂರ್ಣ ಮಾರ್ಗವು ಹಂತ-ಹಂತವಾಗಿ ಕಾರ್ಯಾರಂಭ ಮಾಡಲಿದೆ ಎಂದಿದ್ದಾರೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ 456 ಕಿ.ಮೀ ಕಂಬಗಳ (ಪಿಯರ್) ನಿರ್ಮಾಣ ಮತ್ತು 371 ಕಿ.ಮೀ ಎತ್ತರಿಸಿದ ಮಾರ್ಗದ (ವಯಡಕ್ಟ್) ಕೆಲಸ ಪೂರ್ಣಗೊಂಡಿದೆ. ಇದರೊಂದಿಗೆ 299 ಕಿ.ಮೀ ಉದ್ದಕ್ಕೂ ಶಬ್ದ ತಡೆಗೋಡೆಗಳು ಹಾಗೂ 206 ಕಿ.ಮೀ ಮಾರ್ಗದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಎಂಟು ನಿಲ್ದಾಣಗಳ ಮೂಲ ಕಾಮಗಾರಿ ಮುಗಿದಿದ್ದು, ಸಬರಮತಿ, ಸೂರತ್ ಮತ್ತು ಥಾಣೆಯಲ್ಲಿ ರೈಲು ನಿರ್ವಹಣಾ ಘಟಕಗಳ ಕೆಲಸ ಭರದಿಂದ ಸಾಗಿದೆ.

ಈ ಯೋಜನೆಯ ಅತ್ಯಂತ ರೋಚಕ ಭಾಗವೆಂದರೆ ಮಹಾರಾಷ್ಟ್ರದ ಥಾಣೆ ಕೊಲ್ಲಿಯ ಸಮುದ್ರದ ತಳದಲ್ಲಿ ನಿರ್ಮಾಣವಾಗುತ್ತಿರುವ ಸುರಂಗ ಮಾರ್ಗ. 21 ಕಿ.ಮೀ ಉದ್ದದ ಸುರಂಗದಲ್ಲಿ ಬರೋಬ್ಬರಿ 7 ಕಿ.ಮೀ ಮಾರ್ಗವು ಸಮುದ್ರದ ಆಳದಲ್ಲಿ ಹಾದುಹೋಗಲಿದೆ. ಇದಕ್ಕಾಗಿ ನಾಲ್ಕು ಅಂತಸ್ತಿನ ಕಟ್ಟಡದಷ್ಟು ಎತ್ತರ, 500 ಆನೆಗಳಷ್ಟು ತೂಕ ಮತ್ತು ಐದು ಕ್ರಿಕೆಟ್ ಪಿಚ್‌ಗಳಷ್ಟು ಉದ್ದವಿರುವ ದೈತ್ಯ ಸುರಂಗ ಕೊರೆಯುವ ಯಂತ್ರಗಳನ್ನು ಬಳಸಲಾಗುತ್ತಿದೆ.

ಭಾರತದ ಮೊದಲ ಬುಲೆಟ್ ರೈಲುಗಳನ್ನು ಚೆನ್ನೈನ ಐಸಿಎಫ್ ಮತ್ತು ಬೆಂಗಳೂರಿನ ಬಿಇಎಂಎಲ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಗಂಟೆಗೆ 280 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವಿರುವ 'ಬಿ28' ಮಾದರಿಯ ರೈಲಿನ ಮೊದಲ ಕವಚ ಸಿದ್ಧವಾಗಿದ್ದು, ಸದ್ಯ ಪರೀಕ್ಷೆಗೆ ಒಳಪಡಿಸಲಾಗಿದೆ. 2027ರ ಮಧ್ಯಭಾಗದಲ್ಲಿ ಹಳಿಗಳ ಮೇಲೆ ಇದರ ಪ್ರಾಯೋಗಿಕ ಸಂಚಾರ ನಡೆಯಲಿದೆ. ಮುಂದಿನ ಹಂತದಲ್ಲಿ ಗಂಟೆಗೆ 350 ಕಿ.ಮೀ ವೇಗದ 'ಬಿ35' ರೈಲುಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha