Dailyhunt Logo
  • Light mode
    Follow system
    Dark mode
    • Play Story
    • App Story
ಇದಪ್ಪ ಮಾಹಿತಿ ಆಯುಕ್ತರ ಕೆಲಸ ಅಂದ್ರೆ! ಪೊಲೀಸ್ ಠಾಣೆ ಹಾರ್ಡ್‌ಡಿಸ್ಕ್ 'FSL'ಗೆ ರವಾನಿಸಿ ಅರ್ಜಿದಾರನಿಗೆ ಮಾಹಿತಿ

ಇದಪ್ಪ ಮಾಹಿತಿ ಆಯುಕ್ತರ ಕೆಲಸ ಅಂದ್ರೆ! ಪೊಲೀಸ್ ಠಾಣೆ ಹಾರ್ಡ್‌ಡಿಸ್ಕ್ 'FSL'ಗೆ ರವಾನಿಸಿ ಅರ್ಜಿದಾರನಿಗೆ ಮಾಹಿತಿ

Kannada News Now 1 month ago

ಬೆಂಗಳೂರು: ಪೊಲೀಸ್ ಠಾಣೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳ ಹಾರ್ಡ್‌ಡಿಸ್ಕ್ ಅನ್ನು ವಿಜ್ಞಾನ ಪ್ರಯೋಗಾಲಯದ (FSL) ತಪಾಸಣೆಗೆ ಒಳಪಡಿಸಿ, ಅದರಲ್ಲಿ ಲಭ್ಯವಿದ್ದ ಮಾಹಿತಿಯನ್ನು ಮೇಲ್ಮನವಿದಾರರಿಗೆ ಕೊಡಿಸಿರುವ ಅತ್ಯಂತ ಅಪರೂಪದ ಮತ್ತು ವಿಶೇಷ ಪ್ರಕರಣವೊಂದು ಕರ್ನಾಟಕ ಮಾಹಿತಿ ಆಯೋಗದಲ್ಲಿ ವರದಿಯಾಗಿದೆ.

ಮಾಹಿತಿ ನೀಡಲು ಸತತ ನಿರ್ಲಕ್ಷ್ಯ ವಹಿಸಿದ್ದ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದ ಅಂದಿನ ಡಿವೈಎಸ್ಪಿ (ಪ್ರಸ್ತುತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ) ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆಯೂ ಆಯೋಗವು ಶಿಫಾರಸು ಮಾಡಿದೆ.

ಪ್ರಕರಣದ ಹಿನ್ನೆಲೆ: ಆರು ತಿಂಗಳ ದೃಶ್ಯಾವಳಿ ಕೋರಿದ್ದ ನಾಗರಾಜು

ಮಂಡ್ಯ ಜಿಲ್ಲೆಯ ಮಳವಳ್ಳಿಯ ನಾಗರಾಜು ಎಂ.ಆರ್. ಎಂಬುವರು 2022ರ ಆಗಸ್ಟ್ 4 ರಂದು ಮಳವಳ್ಳಿಯ ಅಂದಿನ ಡಿವೈಎಸ್ಪಿ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ (RTI) ಅರ್ಜಿ ಸಲ್ಲಿಸಿದ್ದರು. ಮಳವಳ್ಳಿ ಪುರ ಪೊಲೀಸ್ ಠಾಣೆ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 10-10-2021 ರಿಂದ 31-03-2022ರ ಅವಧಿಯಲ್ಲಿ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳ (CCTV Footage) ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಅವರು ಕೋರಿದ್ದರು.

ಆದರೆ, ಮಳವಳ್ಳಿ ಪುರ ಹಾಗೂ ಗ್ರಾಮಾಂತರ ಠಾಣೆಯ ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆಯ ನಿಯಮ 8(1)(ಜೆ) ಪ್ರಕಾರ ಈ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ನಿರಾಕರಿಸಿ ಹಿಂಬರಹ ನೀಡಿದ್ದರು.

ನಿಯಮಗಳ ಪ್ರಕಾರ, ಸಾರ್ವಜನಿಕ ಪ್ರಾಧಿಕಾರಕ್ಕೆ ಸಂಬಂಧಿಸದ ಮಾಹಿತಿಯಾಗಿದ್ದರೆ ಅಥವಾ ಆ ಮಾಹಿತಿ ಬೇರೆ ಪ್ರಾಧಿಕಾರದಲ್ಲಿದ್ದರೆ, ಅರ್ಜಿಯನ್ನು ನಿಯಮಬದ್ಧವಾಗಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿ ಆ ಬಗ್ಗೆ ಅರ್ಜಿದಾರರ ಗಮನಕ್ಕೆ ತರಬೇಕಿತ್ತು. ಆದರೆ, ಅಂದಿನ ಡಿವೈಎಸ್ಪಿ ಅವರು ಈ ಪ್ರಕ್ರಿಯೆಯಲ್ಲಿ ಕೆಲವು ಗಂಭೀರ ಲೋಪಗಳನ್ನು ಎಸಗಿದ್ದರು. ಅಲ್ಲದೆ, ಅಂದಿನ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಸಹ ಪ್ರಥಮ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನಡೆಸಿರಲಿಲ್ಲ.

ನಿಯಮ ಉಲ್ಲಂಘನೆ ಮತ್ತು ಅಧಿಕಾರಿಗಳ ವಾದ

ಅಂದಿನ ಮಳವಳ್ಳಿ ಡಿವೈಎಸ್ಪಿ ಹಾಗೂ ಪ್ರಸ್ತುತ ಬಳ್ಳಾರಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ (ASP) ನವೀನ್‌ಕುಮಾರ್ ಅವರು ಮಾಹಿತಿ ಹಕ್ಕು ಅರ್ಜಿಯನ್ನು ನಿಯಮ 6(3)ರ ಅಡಿಯಲ್ಲಿ ಪುರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳಿಗೆ ಅಧಿಕೃತವಾಗಿ ವರ್ಗಾವಣೆ ಮಾಡಿರಲಿಲ್ಲ. ಈ ವರ್ಗಾವಣೆಯ ಮಾಹಿತಿಯನ್ನು ಅರ್ಜಿದಾರರಾದ ನಾಗರಾಜು ಅವರಿಗೂ ಒದಗಿಸಿರಲಿಲ್ಲ. ಕೇವಲ ಪುರ ಠಾಣೆಗೆ ಮಾತ್ರ ಒಂದು ಜ್ಞಾಪನ ಪತ್ರ ಹೊರಡಿಸಲಾಗಿತ್ತು.

ಆದಾಗ್ಯೂ, ಎರಡೂ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮಾಹಿತಿ ನೀಡಲು ಸಾಧ್ಯವಿಲ್ಲವೆಂದು ಹಿಂಬರಹ ನೀಡಿದ್ದರು. ಆಯೋಗದ ವಿಚಾರಣೆಯ ವೇಳೆ, ತಾವು ಹಿರಿಯ ಅಧಿಕಾರಿಗಳ ಮೌಖಿಕ ಸೂಚನೆಯ ಮೇರೆಗೇ ಈ ಹಿಂಬರಹ ನೀಡಿರುವುದಾಗಿ ಇನ್ಸ್‌ಪೆಕ್ಟರ್‌ಗಳು ಒಪ್ಪಿಕೊಂಡಿದ್ದರು. ಜೊತೆಗೆ, ಸಿಸಿಟಿವಿ ಕ್ಯಾಮೆರಾದ ಫೂಟೇಜ್ ಕೇವಲ ಆರು ತಿಂಗಳು ಮಾತ್ರ ಲಭ್ಯವಿರುತ್ತದೆ ಎಂಬುದು ಪೊಲೀಸ್ ಅಧಿಕಾರಿಗಳ ಮುಖ್ಯ ವಾದವಾಗಿತ್ತು.

ಹಾರ್ಡ್‌ಡಿಸ್ಕ್ ತನಿಖೆಗೆ ರಾಜ್ಯ ಮಾಹಿತಿ ಆಯುಕ್ತರ ಕಡಕ್ ಆದೇಶ

ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಮಾಹಿತಿ ಆಯೋಗದ ನಾಲ್ಕನೇ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಅವರು ಮಹತ್ವದ ಆದೇಶ ಹೊರಡಿಸಿದರು. ಎರಡೂ ಪೊಲೀಸ್ ಠಾಣೆಗಳ ಸಿಸಿಟಿವಿ ಕ್ಯಾಮೆರಾಗಳ ಹಾರ್ಡ್‌ಡಿಸ್ಕ್ ಅನ್ನು ತಕ್ಷಣವೇ ಬೆಂಗಳೂರಿನ ಮಡಿವಾಳದಲ್ಲಿರುವ ಎಫ್‌ಎಸ್‌ಎಲ್ (FSL - ವಿಧಿವಿಜ್ಞಾನ ಪ್ರಯೋಗಾಲಯ) ಗೆ ಕಳುಹಿಸಿ ವೈಜ್ಞಾನಿಕ ತನಿಖೆಗೆ ಒಳಪಡಿಸಬೇಕು ಮತ್ತು ಅದರಲ್ಲಿ ಲಭ್ಯವಾಗುವ ದೃಶ್ಯಾವಳಿಗಳನ್ನು ಅರ್ಜಿದಾರರಿಗೆ ನೀಡಬೇಕು ಎಂದು ಸೂಚಿಸಿದರು.

ಹೀಗೆ ಮಾಹಿತಿ ನೀಡುವಾಗ, ಅರ್ಜಿದಾರರು ಠಾಣೆಗೆ ಭೇಟಿ ನೀಡಿದ ಸಂದರ್ಭ ಹಾಗೂ ಅವರನ್ನು ವಿಚಾರಣೆಗೆ ಒಳಪಡಿಸಿದ ದೃಶ್ಯಾವಳಿಗಳನ್ನು ಮಾತ್ರ ನೀಡಬೇಕು ಮತ್ತು ಕ್ಯಾಮೆರಾದಲ್ಲಿ ದಾಖಲಾಗಿರುವ ಇತರ ಗೌಪ್ಯ ಮಾಹಿತಿಯನ್ನು ನ್ಯಾಯಾಲಯಗಳ ಆದೇಶದಂತೆ ಮುಸುಕು (Blur/Mask) ಮಾಡಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದರು.

ಎಫ್‌ಎಸ್‌ಎಲ್ ಪರಿಶೀಲನೆ ಹಾಗೂ ಸಿಡಿಗೆ ವರ್ಗಾವಣೆ

ಆಯೋಗದ ಆದೇಶದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಮಳವಳ್ಳಿಯ ಹಾಲಿ ಡಿವೈಎಸ್ಪಿ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಯಶವಂತಕುಮಾರ್ ಅವರು, ಎರಡೂ ಪೊಲೀಸ್ ಠಾಣೆಗಳ ಸಿಸಿಟಿವಿ ಹಾರ್ಡ್‌ಡಿಸ್ಕ್‌ಗಳನ್ನು ಬೆಂಗಳೂರಿನ ಮಡಿವಾಳ ಎಫ್‌ಎಸ್‌ಎಲ್‌ಗೆ ಸಲ್ಲಿಸಿದರು. ತಜ್ಞರಿಂದ ವೈಜ್ಞಾನಿಕ ವಿಶ್ಲೇಷಣೆ ನಡೆಸಿ, ಅದರಲ್ಲಿ ಚೇತರಿಸಿಕೊಳ್ಳಲಾದ (Recovered) ದೃಶ್ಯಾವಳಿಗಳ ಮಾಹಿತಿಯನ್ನು ಸಿಡಿಗೆ (CD) ವರ್ಗಾವಣೆ ಮಾಡಿ, ತಜ್ಞರ ವರದಿಯೊಂದಿಗೆ ಅರ್ಜಿದಾರರಿಗೆ ಯಶಸ್ವಿಯಾಗಿ ತಲುಪಿಸಿದರು.

ಮಾಹಿತಿ ಆಯೋಗದ ಇತಿಹಾಸದಲ್ಲೇ ಪೊಲೀಸ್ ಠಾಣೆಯ ಸಿಸಿಟಿವಿ ಹಾರ್ಡ್‌ಡಿಸ್ಕ್ ಅನ್ನು ಎಫ್‌ಎಸ್‌ಎಲ್ ಪರಿಶೀಲನೆಗೆ ಒಳಪಡಿಸಿ ಅರ್ಜಿದಾರರಿಗೆ ಮಾಹಿತಿ ಕೊಡಿಸಿದ ಮೊದಲ ಅಪರೂಪದ ಪ್ರಕರಣ ಇದಾಗಿದೆ. ತಮಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ ಎಂಬ ಕೆಲವು ಆಕ್ಷೇಪಗಳನ್ನು ಅರ್ಜಿದಾರರು ವ್ಯಕ್ತಪಡಿಸಿದರಾದರೂ, ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರ ಕಾರ್ಯವೈಖರಿಗೆ ಮುಕ್ತ ಕಂಠದಿಂದ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ತನಿಖಾ ಸಮಿತಿ ರಚನೆ ಮತ್ತು ಅಧಿಕಾರಿಗೆ ನೋಟಿಸ್

ಈ ಮಧ್ಯೆ, ಬಳ್ಳಾರಿ ಎಎಸ್‌ಪಿ ನವೀನ್‌ಕುಮಾರ್ ಅವರು ತಾವು ನಿಯಮಬದ್ಧವಾಗಿಯೇ ಅರ್ಜಿಯನ್ನು ವರ್ಗಾವಣೆ ಮಾಡಿರುವುದಾಗಿ ಲಿಖಿತ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಸತ್ಯಾಸತ್ಯತೆ ತಿಳಿಯಲು ಮಂಡ್ಯ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ (ASP) ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸಿ ವರದಿ ನೀಡುವಂತೆ ಮಂಡ್ಯ ಎಸ್‌ಪಿಗೆ ಆಯೋಗ ಸೂಚಿಸಿತ್ತು.

ಅದರಂತೆ, ಮಂಡ್ಯ ಎಎಸ್‌ಪಿ ಗಂಗಾಧರಸ್ವಾಮಿ ಅವರು ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ಅದರಲ್ಲಿ ಮಾಹಿತಿ ಹಕ್ಕು ಕಾಯ್ದೆಯ ನಿಯಮ 6(3)ರ ಅಡಿ ಪೂರ್ಣ ಪ್ರಮಾಣದ ಅರ್ಜಿ ವರ್ಗಾವಣೆ ನಡೆದಿಲ್ಲ, ಕೇವಲ ಜ್ಞಾಪನಾ ಪತ್ರ ಹೊರಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿ ನಿರ್ಲಕ್ಷಿಸಿದ ನವೀನ್‌ಕುಮಾರ್ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ಆಯೋಗ ಸೂಚನೆ ನೀಡಿದ್ದು, ಈಗಾಗಲೇ ಅವರಿಗೆ ನೋಟಿಸ್ ಜಾರಿಯಾಗಿದೆ. ನವೀನ್‌ಕುಮಾರ್ ಅವರು ತಮ್ಮ ಸಮಜಾಯಿಷಿಯನ್ನು ಬಳ್ಳಾರಿ ಎಸ್‌ಪಿ ಹಾಗೂ ಮಾಹಿತಿ ಆಯೋಗಕ್ಕೆ ಸಲ್ಲಿಕೆ ಮಾಡಿದ್ದಾರೆ.

ಕೊನೆಯದಾಗಿ, ಮೇಲಧಿಕಾರಿಗಳ ಮೌಖಿಕ ಸೂಚನೆ ಪಾಲಿಸಿ ಅರ್ಜಿ ನಿರ್ಲಕ್ಷಿಸಿದ್ದ ಎರಡೂ ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ, ಮುಂದಿನ ದಿನಗಳಲ್ಲಿ ಮಾಹಿತಿ ಹಕ್ಕು ಅರ್ಜಿಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸದಂತೆ ಆಯೋಗವು ಕಡಕ್ ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಆ ಮೂಲಕ ಮಾಹಿತಿ ನೀಡಿದ ಅಧಿಕಾರಿಗೆ ಬಿಸಿ ಮುಟ್ಟಿಸೋ ಕೆಲಸ ಮಾಡಿದ್ದಲ್ಲದೇ, ಆಯೋಗದ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸ್ ಠಾಣೆ ಸಿಸಿಟಿವಿ ಹಾರ್ಡ್ ಡಿಸ್ಕ್ ವೀಡಿಯೋ ರಿಕವರಿಗೆ ಎಫ್‌ಎಸ್‌ಎಲ್ ಗೆ ರವಾನಿಸಿ, ಅರ್ಜಿದಾರನಿಗೆ ಕೊಡಿಸುವ ಮೂಲಕ ಆಯುಕ್ತ ರುದ್ರಣ್ಣ ಹರ್ತಿಕೋಟೆ ಹೊಸ ಭಾಷ್ಯವನ್ನು ಬರೆದಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Dailyhunt
Disclaimer: This content has not been generated, created or edited by Dailyhunt. Publisher: Kannada News Now