Thursday, 03 Dec, 9.15 am ಕನ್ನಡ ಧ್ವನಿ ನ್ಯೂಸ್

Posts
ಐಸಿಸಿ ಟಿ20 ರ‍್ಯಾಂಕಿಂಗ್‌: ಆಸೀಸ್‌ಗೆ ಸಡ್ಡು ಹೊಡೆದ ಇಂಗ್ಲೆಂಡ್‌ಗೆ ನಂ.1 ಪಟ್ಟ!

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯಲ್ಲಿ 3-0 ಅಂತರದ ವೈಟ್‌ವಾಶ್‌ ಗೆಲುವು ದಾಖಲಿಸಿದ ಪ್ರವಾಸಿ ಇಂಗ್ಲೆಂಡ್‌ ತಂಡ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರಕಟಿಸಿದ ನೂತನ ಐಸಿಸಿ ಟಿ20 ಕ್ರಿಕೆಟ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಸರಣಿಯುದ್ದಕ್ಕೂ ಅಧಿಕಾರಯುತ ಆಟವಾಡಿದ ಐಯಾನ್‌ ಮಾರ್ಗನ್‌ ಸಾರಥ್ಯದ ಇಂಗ್ಲೆಂಡ್‌ ತಂಡ ಮಂಗಳವಾರ ನಡೆದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ನಂ.1 ಸ್ಥಾದಲ್ಲಿದ್ದ ತನ್ನ ಬದ್ಧ ಎದುರಾಳಿ ಆಸ್ಟ್ರೇಲಿಯಾಗೆ ಸಡ್ಡು ಹೊಡೆದು ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿದೆ.ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ ತನ್ನ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 191 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಹರಿಣಗಳ ಪರ ರಾಸಿ ವ್ಯಾನ್‌ ಡೆರ್‌ ಡುಸೆನ್ 32 ಎಸೆತಗಳಲ್ಲಿ ಅಜೇಯ 74 ರನ್‌ ಮತ್ತು ಮಾಜಿ ನಾಯಕ ಫಾಫ್‌ ಡು'ಪ್ಲೆಸಿಸ್ 37 ಎಸೆತಗಳಲ್ಲಿ ಅಜೇಯ 52 ರನ್‌ ಚೆಚ್ಚಿ ತಂಡಕ್ಕೆ ಬೃಹತ್‌ ಮೊತ್ತ ತಂದುಕೊಟ್ಟರು.ಗುರಿ ಬೆನ್ನತ್ತಿದ ಒಡಿಐ ವಿಶ್ವ ಚಾಂಪಿಯನ್ಸ್‌ ಇಂಗ್ಲೆಂಡ್, ಕೇವಲ ಒಂದು ವಿಕೆಟ್‌ ನಷ್ಟದಲ್ಲಿ ಇನ್ನು 14 ಎಸೆತಗಳು ಬಾಕಿ ಇರುವಾಗಲೇ 192 ರನ್‌ ಸಿಡಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಇಂಗ್ಲೆಂಡ್‌ ಪರ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಡಾವಿಡ್‌ ಮಲಾನ್‌ (ಅಜೇಯ 99) ಕೇವಲ ಒಂದು ರನ್‌ ಅಂತರದಲ್ಲಿ ಶತಕ ವಂಚಿತರಾದರು.ಮಲಾನ್‌ 47 ಎಸೆತಗಳಲ್ಲಿ 11 ಫೋರ್‌ ಮತ್ತು 5 ಸಿಕ್ಸರ್‌ಗಳೊಂದಿಗೆ ಅಬ್ಬರಿಸಿದರೆ, ಅವರಿಗೆ ಉತ್ತಮ ಸಾಥ್‌ ನೀಡಿದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್ ಜೋಸ್‌ ಬಟ್ಲರ್‌, 46 ಎಸೆತಗಳಲ್ಲಿ 3 ಫೋರ್ ಮತ್ತು 5 ಸಿಕ್ಸರ್‌ಗಳೊಂದಿಗೆ ಅಜೇಯ 67 ರನ್‌ ಚೆಚ್ಚಿ ತಂಡವನ್ನು ಸುಲಭವಾಗಿ ಗುರಿ ಮುಟ್ಟುವಂತೆ ಮಾಡಿದರು. ಈ ಜೋಡಿ 2ನೇ ವಿಕೆಟ್‌ಗೆ ದಾಖಲೆಯ 167* ರನ್‌ಗಳ ಜೊತೆಯಾಟವಾಡಿತು.ಮಲಾನ್‌ ಜೀವನಶ್ರೇಷ್ಠ ಸಾಧನೆ

ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಆಗಿರುವ ಇಂಗ್ಲೆಂಡ್‌ನ ಡಾವಿಡ್‌ ಮಲಾನ್‌, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರೇಟಿಂಗ್‌ ಸಂಪಾದಿಸಿದ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ 2 ಅರ್ಧಶತಕಗಳನ್ನು ಒಳಗೊಂಡ 173 ರನ್‌ಗಳನ್ನು ಚೆಚ್ಚಿರುವ 33 ವರ್ಷದ ಎಡಗೈ ಬ್ಯಾಟ್ಸ್‌ಮನ್, ಒಟ್ಟು 915 ರೇಟಿಂಗ್ಸ್‌ ಸಂಪಾದಿಸಿದ್ದಾರೆ. ಈ ಮೂಲಕ ಆಸೀಸ್‌ ನಾಯಕ ಆರೊನ್‌ ಫಿಂಚ್‌ ನಂತರ 900+ ರೇಟಿಂಗ್‌ ಅಂಕಗಳ ಗಡಿ ದಾಟಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಫಿಂಚ್ 2018ರ ಜುಲೈನಲ್ಲಿ 900 ರೇಟಿಂಗ್‌ ಹೊಂದಿದ್ದರು. ಇನ್ನು ಮಲಾನ್ ತಮ್ಮ ಸಮೀಪದ ಸ್ಪರ್ಧಿ ಪಾಕಿಸ್ತಾನದ ನಾಯಕ ಬಾಬರ್‌ ಆಝಮ್ (2ನೇ ಸ್ಥಾನ) ಅವರಿಗಿಂತಲೂ 44 ಅಂಕಗಳ ಮುನ್ನಡೆಯಲ್ಲಿದ್ದಾರೆ.ಆಸೀಸ್‌ಗೆ ನಂ.1 ಸ್ಥಾನ ಮರಳಿ ಪಡೆಯುವ ಅವಕಾಶ

ಐಸಿಸಿ ಟಿ20 ರ‍್ಯಾಂಕಿಂಗ್‌ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಾರಿರುವ ಆಸ್ಟ್ರೇಲಿಯಾ ತಂಡ ಇದೀಗ ತನ್ನ ಅಗ್ರಸ್ಥಾನವನ್ನು ಮರಳಿ ಪಡೆಯುವ ಅವಕಾಶ ಪಡೆದಿದೆ. ಪ್ರವಾಸಿ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯನ್ನು ಆಡಲಿರುವ ಕಾಂಗರೂ ಪಡೆ ಕನಿಷ್ಠ 2-1 ಅಂತರದಲ್ಲಿ ಸರಣಿ ಗೆದ್ದರೂ ಮರಳಿ ನಂ.1 ಸ್ಥಾನ ಪಡೆದುಕೊಳ್ಳಲಿದೆ. ಟೀಮ್ ಇಂಡಿಯಾ 3-0 ಅಂತರದಲ್ಲಿ ವೈಟ್‌ವಾಶ್‌ ಮಾಡಿದರೆ 2ನೇ ಶ್ರೇಯಾಂಕ ಪಡೆಯುವ ಅವಕಾಶ ಹೊಂದಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: kannada dhvani nyus
Top