Dailyhunt
50 ಸಾವಿರ ರೂ. ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ

50 ಸಾವಿರ ರೂ. ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ

ದಾವಣಗೆರೆ: ವೈದ್ಯರೊಬ್ಬರಿಂದ 50 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಚಂದ್ರಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನಾಗನೂರು ಗ್ರಾಮದ ಜಮೀನು ಹದ್ದುಬಸ್ತಿಗೆ ಸಂಬಂಧಿಸಿದಂತೆ ವೈದ್ಯರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಲಂಚದ ಹಣದ ಸಹಿತ ಚಂದ್ರಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವೈದ್ಯ ಡಾ. ಉಮೇಶ್ ಹಿರೇಮಠ ಅವರು ನಾಗನೂರು ಗ್ರಾಮದ ಸರ್ವೇ ನಂಬರ್ 158 ರಲ್ಲಿ ಜಮೀನು ಹೊಂದಿದ್ದು, ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಏಕ ನಿವೇಶನಕ್ಕೆ ಅನುಮೋದನೆ ಪಡೆದುಕೊಂಡಿದ್ದಾರೆ. ನಂತರದಲ್ಲಿ ಪಕ್ಕದ ಜಮೀನಿನವರು ತಕರಾರು ವ್ಯಕ್ತಪಡಿಸಿದ್ದರಿಂದ ಜಮೀನಿನ ಹದ್ದುಬಸ್ತಿಗೆ ವೈದ್ಯ ಉಮೇಶ್ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಮಾರ್ಚ್ 18ರಂದು ವೈದ್ಯರ ಖಾಸಗಿ ಆಸ್ಪತ್ರೆಗೆ ತೆರಳಿದ ಕಂದಾಯ ನಿರೀಕ್ಷಕ ಚಂದ್ರಪ್ಪ ಹದ್ದುಬಸ್ತು ಮಾಡಿ ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ನೀಡಲು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಈ ಕುರಿತಾಗಿ ವೈದ್ಯ ಉಮೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಶನಿವಾರ ತಾಲೂಕು ಕಚೇರಿಯಲ್ಲಿ ವೈದ್ಯರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ ಹಣದ ಸಹಿತ ಕಂದಾಯ ನಿರೀಕ್ಷಕ ಚಂದ್ರಪ್ಪ ಅವರನ್ನು ವಶಕ್ಕೆ ಪಡೆದುಕೊಂಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia