ಕಲಬುರಗಿ: ಪಾಕಿಸ್ತಾನ ಹಾಗೂ ಐಸಿಸ್ ಉಗ್ರ ಸಂಘಟನೆ ಜೊತೆ ನಿರಂತರ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ಇಬ್ಬರು ಶಂಕಿತರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಕಲಬುರಗಿಯಲ್ಲಿ ವಶಕ್ಕೆ ಪಡೆದುಕೊಂಡಿದೆ.
ಕೇಂದ್ರ ಗುಪ್ತಚರ ಇಲಾಖೆ ನೀಡಿದ ನಿಖರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಉತ್ತರ ಪ್ರದೇಶದ ಎಟಿಎಸ್ ತಂಡ, ಕಲಬುರಗಿ ತಾಲೂಕಿನ ಮಾಲಗತ್ತಿ ಹಾಗೂ ಉಪಳಾಂವ್ ಗ್ರಾಮದ ಹೊರವಲಯದಲ್ಲಿ ಉತ್ತರ ಪ್ರದೇಶ ಮೂಲದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಎಟಿಎಸ್ ತಂಡ ವಶಕ್ಕೆ ಪಡೆದಿರುವ ಆರೋಪಿಗಳನ್ನು ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಸಮೀರ್ ಮತ್ತು ಸಲ್ಮಾನ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮಾಂಸ ರಫ್ತು ಮಾಡುವ ಫೇರ್ ಎಕ್ಸ್ ಪೋರ್ಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು.
ಇಬ್ಬರು ಆರೋಪಿಗಳು ವಾಟ್ಸಾಪ್ ಕರೆಗಳು ಹಾಗೂ ಫೇಸ್‌ಬುಕ್ ಮೂಲಕ ಪಾಕಿಸ್ತಾನ ಮತ್ತು ಐಸಿಸ್ ಜೊತೆ ನಿರಂತರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಎಟಿಎಸ್ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಆರೋಪಿ ಸಮೀರ್ ಉಳಿದುಕೊಂಡಿದ್ದ ಕೊಠಡಿಯಲ್ಲಿ ಕೆಲವು ಮ್ಯಾಪ್‌ಗಳು ಪತ್ತೆಯಾಗಿವೆ.
ಸದ್ಯ ಇಬ್ಬರು ಆರೋಪಿಗಳನ್ನು ಕಲಬುರಗಿಯ ಅಜ್ಞಾತ ಸ್ಥಳದಲ್ಲಿಟ್ಟು ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂತಾರಾಜ್ಯ ಸೋಷಿಯಲ್ ಮೀಡಿಯಾ ಮಾನಿಟಿರಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಸಾಮಾಜಿಕ ಜಾಲತಾಣದ ಖಾತೆಗಳ ಮೇಲೆ ಕಳೆದ ಕೆಲವು ದಿನಗಳಿಂದ ಸತತ ನಿಗಾ ಇಡಲಾಗಿತ್ತು. ಪಾಕಿಸ್ತಾನದ ವ್ಯಕ್ತಿಗಳು ನಿರ್ವಹಿಸುತ್ತಿದ್ದ ಫೇಸ್‌ಬುಕ್ ಪೇಜ್ ಹಾಗೂ ಇತರೆ ದೇಶವಿರೋಧಿ ಜಾಲತಾಣಗಳ ಜೊತೆ ಸಮೀರ್ ನಿರಂತರ ಸಂಪರ್ಕದಲ್ಲಿದ್ದ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಇದರ ಆಧಾರದ ಮೇಲೆ ಕಲಬುರಗಿ ಪೊಲೀಸರು ಮತ್ತು ಉತ್ತರ ಪ್ರದೇಶದ ಎಟಿಎಸ್ ತಂಡ ಜಂಟಿಯಾಗಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

