Friday, 07 Aug, 7.57 am ಕನ್ನಡದುನಿಯಾ

ಹೋಮ್
ಬಾಹುಬಲಿ 'ಬಲ್ಲಾಳ ದೇವ' ನ ವಿವಾಹ ಸಮಾರಂಭಕ್ಕೆ ಅದ್ದೂರಿ ಸಿದ್ಧತೆ

ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಬಲ್ಲಾಳ ದೇವ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮನೆ ಮಾತಾಗಿದ್ದ ರಾಣಾ ದಗ್ಗುಬಾಟಿ, ಶನಿವಾರದಂದು ತಮ್ಮ ಗೆಳತಿ ಮಿಹಿಕ ಬಜಾಜ್ ಅವರ ಜೊತೆ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ. ಇದಕ್ಕಾಗಿ ಅದ್ದೂರಿ ಸಿದ್ಧತೆ ನಡೆದಿದ್ದು, ಹೈದರಾಬಾದಿನ ಪ್ರತಿಷ್ಠಿತ ಬಂಜಾರ ಹಿಲ್ಸ್ ನಲ್ಲಿರುವ ರಾಣಾ ದಗ್ಗುಬಾಟಿ ಅವರ ನಿವಾಸ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ.

'ದಗ್ಗುಬಾಟಿ' ಕುಟುಂಬ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರಾಗಿದ್ದು, ಈ ಕುಟುಂಬದ ಬಹುತೇಕರು ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಸಹಜವಾಗಿಯೇ ವಿವಾಹ ಸಮಾರಂಭವನ್ನು ವಿಜೃಂಭಣೆಯಿಂದ ನೆರವೇರಿಸಬೇಕೆಂಬ ಚಿಂತನೆಯಲಿ ರಾಣಾ ದಗ್ಗುಬಾಟಿ ಅವರ ತಂದೆ ಸುರೇಶ್ ಬಾಬು ಇದ್ದರು. ಆದರೆ ಕೊರೊನಾ ಕಾರಣಕ್ಕೆ ಕೇವಲ ಐವತ್ತು ಮಂದಿ ಅತಿಥಿಗಳ ಸಮ್ಮುಖದಲ್ಲಿ ಈ ವಿವಾಹ ಸಮಾರಂಭ ನಡೆಯಲಿದೆ.

ಆದರೂ ಅದ್ದೂರಿತನಕ್ಕೆ ದಗ್ಗುಬಾಟಿ ಕುಟುಂಬ ಕಡಿಮೆ ಮಾಡಿಲ್ಲ. ವಿವಾಹ ನಡೆಯುವ ಸ್ಥಳ ಹೂವಿನ ಅಲಂಕಾರದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿವಾಹ ಸಮಾರಂಭಕ್ಕೆ ಚಿರಂಜೀವಿ, ರಾಮಚರಣ್, ಸಮಂತಾ, ನಾಗಚೈತನ್ಯ ಸೇರಿದಂತೆ ಹಲವು ನಟ-ನಟಿಯರು ಪಾಲ್ಗೊಳ್ಳಲಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ವಿವಾಹ ಸಮಾರಂಭಕ್ಕೆ ಆಗಮಿಸುವ ಅತಿಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗುತ್ತದೆ ಎನ್ನಲಾಗಿದೆ. ಅಲ್ಲದೆ ಸಮಾರಂಭ ನಡೆಯುವ ಸ್ಥಳದಲ್ಲಿ ಪ್ರತಿ ಗಂಟೆಗೊಮ್ಮೆ ಸ್ಯಾನಿಟೈಸ್ ಮಾಡಲು ತೀರ್ಮಾನಿಸಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top