Dailyhunt Logo
  • Light mode
    Follow system
    Dark mode
    • Play Story
    • App Story
ಬಾಲಿವುಡ್‌ನಲ್ಲಿ ಮದುವೆ ಸಂಭ್ರಮ: ಜುಲೈ 6 ಕ್ಕೆ ಬಾಯ್‌ಫ್ರೆಂಡ್ ರೋಹನ್ ಕೈ ಹಿಡಿಯಲಿದ್ದಾರೆ ಬೋನಿ ಕಪೂರ್ ಪುತ್ರಿ ಅಂಶುಲಾ ಕಪೂರ್

ಬಾಲಿವುಡ್‌ನಲ್ಲಿ ಮದುವೆ ಸಂಭ್ರಮ: ಜುಲೈ 6 ಕ್ಕೆ ಬಾಯ್‌ಫ್ರೆಂಡ್ ರೋಹನ್ ಕೈ ಹಿಡಿಯಲಿದ್ದಾರೆ ಬೋನಿ ಕಪೂರ್ ಪುತ್ರಿ ಅಂಶುಲಾ ಕಪೂರ್

ಖ್ಯಾತ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಹಾಗೂ ನಟ ಅರ್ಜುನ್ ಕಪೂರ್ ಅವರ ಸಹೋದರಿ ಅಂಶುಲಾ ಕಪೂರ್ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ತಮ್ಮ ದೀರ್ಘಕಾಲದ ಗೆಳೆಯ ರೋಹನ್ ಠಕ್ಕರ್ ಅವರೊಂದಿಗೆ ಜುಲೈ 6 ರಂದು ಅತ್ಯಂತ ಆಪ್ತರ ಸಮ್ಮುಖದಲ್ಲಿ ಅಂಶುಲಾ ಅವರ ವಿವಾಹ ಮಹೋತ್ಸವ ಜರುಗಲಿದೆ.

ಈ ಮುಂಬರುವ ಮದುವೆಯ ಸುದ್ದಿಯನ್ನು ಸ್ವತಃ ವಧುವಿನ ತಂದೆ ಬೋನಿ ಕಪೂರ್ ಮಾಧ್ಯಮಗಳ ಮುಂದೆ ಅಧಿಕೃತವಾಗಿ ಖಚಿತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಬೋನಿ ಕಪೂರ್, "ಈ ವಿವಾಹವು ಎರಡು ವಿಭಿನ್ನ ಸಮುದಾಯಗಳ ಸಂಪ್ರದಾಯಗಳ ಸಮ್ಮಿಲನವಾಗಿದ್ದು, ಕೇವಲ ಒಂದೇ ದಿನದಲ್ಲಿ ಮದುವೆಯ ಎಲ್ಲಾ ವಿಧಿವಿಧಾನಗಳು ಸಂಪೂರ್ಣಗೊಳ್ಳಲಿವೆ" ಎಂದು ತಿಳಿಸಿದ್ದಾರೆ. ಮದುವೆಯ ನಂತರ ಬಾಲಿವುಡ್ ಚಿತ್ರರಂಗದ ಗಣ್ಯರಿಗಾಗಿ ವಿಶೇಷ ಕಾಕ್ಟೈಲ್ ಪಾರ್ಟಿಯನ್ನು ಆಯೋಜಿಸಲಾಗಿದ್ದು, ಇದರಲ್ಲಿ ಭಾಗವಹಿಸುವ ಅತಿಥಿಗಳಿಗೆ 'ಮಾಡರ್ನ್ ಇಂಡಿಯನ್' ಉಡುಪುಗಳನ್ನು ಧರಿಸಲು ಸೂಚಿಸಲಾಗಿದೆ ಎನ್ನಲಾಗಿದೆ.

ಈಗಾಗಲೇ ಆರಂಭವಾಗಿದೆ ಮದುವೆ ಸಂಭ್ರಮ

ಅಂಶುಲಾ ಮತ್ತು ರೋಹನ್ ಅವರ ವಿವಾಹದ ಮುನ್ನಾದಿನದ ಆಚರಣೆಗಳು ಜೂನ್ 21 ರಂದೇ ಅಧಿಕೃತವಾಗಿ ಆರಂಭವಾಗಿವೆ. ರೋಹನ್ ಅವರ ಕುಟುಂಬದ ವತಿಯಿಂದ ಆಯೋಜಿಸಲಾಗಿದ್ದ 'ಮಾತಾ ಕಿ ಚೌಕಿ' ಧಾರ್ಮಿಕ ಕಾರ್ಯಕ್ರಮದಲ್ಲಿ ಕಪೂರ್ ಕುಟುಂಬದ ಆಪ್ತರು ಭಾಗವಹಿಸಿದ್ದರು. ಈ ಸಂಭ್ರಮದಲ್ಲಿ ಸಂಜಯ್ ಕಪೂರ್, ಮಹೀಪ್ ಕಪೂರ್, ಸುನಿತಾ ಕಪೂರ್, ಶನಾಯಾ ಕಪೂರ್ ಸೇರಿದಂತೆ ನಟಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಕಾರ್ಯಕ್ರಮದ ವಿಡಿಯೋವನ್ನು ಹಂಚಿಕೊಂಡಿರುವ ಅಂಶುಲಾ ಕಪೂರ್, "ದೇವಿಯ ಆಶೀರ್ವಾದ, ಅಪಾರ ಪ್ರೀತಿ ಮತ್ತು ಮದುವೆಯ ದಿನದವರೆಗೂ ನೆನಪಿನಲ್ಲಿ ಉಳಿಯುವಂತಹ ಅದ್ಭುತ ನೃತ್ಯದಿಂದ ಕೂಡಿದ ಸಂಜೆ ಇದು" ಎಂದು ಬರೆದುಕೊಂಡಿದ್ದಾರೆ. ಇತ್ತ ಸಹೋದರಿ ಮದುವೆಯ ಸಂಭ್ರಮದಲ್ಲಿರುವ ನಟ ಅರ್ಜುನ್ ಕಪೂರ್, "ಅಂಶುಲಾ, ನಮ್ಮ ಸಂಭ್ರಮ ಈಗಷ್ಟೇ ಶುರುವಾಗಿದೆ. ಈ ಸುಂದರ ಕ್ಷಣಗಳು ಇಷ್ಟೊಂದು ಬೇಗ ಕಳೆದುಹೋಗುತ್ತಿವೆ ಎಂದು ನನಗೀಗಾಗಲೇ ಅನಿಸುತ್ತಿದೆ. ನಿಮ್ಮಿಬ್ಬರಿಗಾಗಿ ನಾನು ತುಂಬಾ ಸಂತೋಷವಾಗಿದ್ದೇನೆ" ಎಂದು ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.

ಡೇಟಿಂಗ್ ಆಯಪ್‌ನಲ್ಲಿ ಶುರುವಾದ ಪ್ರೇಮಕಥೆ

ಅಂಶುಲಾ ಕಪೂರ್ ಮತ್ತು ರೋಹನ್ ಠಕ್ಕರ್ ಅವರ ಪರಿಚಯವಾಗಿದ್ದು ಒಂದು ಡೇಟಿಂಗ್ ಆಯಪ್ ಮೂಲಕ ಎಂಬುದು ವಿಶೇಷ. ಕಳೆದ ವರ್ಷ ಜುಲೈನಲ್ಲಿ ನ್ಯೂಯಾರ್ಕ್‌ನ ಪ್ರಸಿದ್ಧ ಸೆಂಟ್ರಲ್ ಪಾರ್ಕ್‌ನಲ್ಲಿ ರೋಹನ್, ಅಂಶುಲಾ ಅವರಿಗೆ ಪ್ರಪೋಸ್ ಮಾಡಿದ್ದರು. ತದನಂತರ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುಂಬೈನಲ್ಲಿ ಇವರಿಬ್ಬರ ಅದ್ಧೂರಿ ನಿಶ್ಚಿತಾರ್ಥದ ಪಾರ್ಟಿ ನಡೆದಿತ್ತು. ಈ ಪಾರ್ಟಿಯಲ್ಲಿ ಸೋನಂ ಕಪೂರ್, ರಿಯಾ ಕಪೂರ್ ಸೇರಿದಂತೆ ಇಡೀ ಕಪೂರ್ ಕುಟುಂಬ ಒಂದೆಡೆ ಸೇರಿ ಸಂಭ್ರಮಿಸಿತ್ತು. ಇದೀಗ ಈ ಜೋಡಿ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia