Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರಿನಲ್ಲೂ 'ಸ್ಮೋಕಿಂಗ್ ಫ್ರೀ ಝೋನ್' ಜಾರಿಗೆ ಸರ್ಕಾರ ಚಿಂತನೆ

ಬೆಂಗಳೂರಿನಲ್ಲೂ 'ಸ್ಮೋಕಿಂಗ್ ಫ್ರೀ ಝೋನ್' ಜಾರಿಗೆ ಸರ್ಕಾರ ಚಿಂತನೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಹತ್ವದ ಚಿಂತನೆ ನಡೆಸಿದೆ. ವಿದೇಶಗಳಲ್ಲಿರುವಂತೆ ಬೆಂಗಳೂರಿನಲ್ಲೂ 'ಸ್ಮೋಕಿಂಗ್ ಫ್ರೀ ಝೋನ್' ಜಾರಿಗೆ ತರಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ ಹಾಗೂ ಕ್ಲಬ್‌ಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡದಿರುವ ಕುರಿತು ತಜ್ಞರ ಸಮಿತಿ ಆರೋಗ್ಯ ಇಲಾಖೆ ಮತ್ತು ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆ ಜಾರಿಯಾದರೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಹೊಗೆಗೆ ಕಡಿವಾಣ ಬೀಳುವ ಸಾಧ್ಯತೆಯಿದೆ.

ಸಿಗರೇಟ್ ಹೊಗೆ ಧೂಮಪಾನ ಮಾಡುವವರ ಆರೋಗ್ಯದ ಮೇಲೆ ಮಾತ್ರವಲ್ಲದೆ, ಸುತ್ತಮುತ್ತಲಿರುವವರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದಾಗ, ಧೂಮಪಾನ ಮಾಡದವರೂ ಸಿಗರೇಟ್‌ನ ವಿಷಕಾರಿ ಹೊಗೆಯನ್ನು ಉಸಿರಾಡಬೇಕಾಗುತ್ತದೆ. ಇದನ್ನೇ ಪ್ಯಾಸಿವ್ ಸ್ಮೋಕಿಂಗ್ ಎಂದು ಕರೆಯಲಾಗುತ್ತದೆ. ಇದರಿಂದ ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಅಪಾಯವಿದೆ. ಹೀಗಾಗಿ ಧೂಮಪಾನಿಗಳಷ್ಟೇ ಅಲ್ಲದೆ, ಸಾರ್ವಜನಿಕರ ಆರೋಗ್ಯ ರಕ್ಷಣೆಯೂ ಮುಖ್ಯ ಎಂಬ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಈ ಕ್ರಮದ ಬಗ್ಗೆ ಚಿಂತನೆ ನಡೆಸಿದೆ.

ವಿದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ವಿಧಿಸಿರುವ ನಿರ್ಬಂಧಗಳ ಮಾದರಿಯಲ್ಲಿ ಬೆಂಗಳೂರಿನಲ್ಲೂ ನಿಯಮ ಜಾರಿಗೆ ತರಲು ಚರ್ಚೆ ನಡೆದಿದೆ. ಹೋಟೆಲ್‌ಗಳು, ಪಬ್‌ಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಲಬ್‌ಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡಬಾರದು ಎಂಬ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಐಟಿ-ಬಿಟಿ ಕಂಪನಿಗಳಲ್ಲಿ ಪ್ರತ್ಯೇಕ ಸ್ಮೋಕಿಂಗ್ ಜೋನ್‌ಗಳ ವ್ಯವಸ್ಥೆ ಇದ್ದರೂ, ಅವುಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಧೂಮಪಾನದಿಂದ ಇತರರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸ್ಮೋಕಿಂಗ್ ಜೋನ್‌ಗಳನ್ನು ನಿರ್ಮಿಸುವ ಬದಲು, ಧೂಮಪಾನಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಲಂಡನ್ ಮಾದರಿಯಲ್ಲಿ ಬೆಂಗಳೂರಿನಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡಬಾರದು ಎಂದು ಕ್ಯಾನ್ಸರ್ ತಜ್ಞರು ಒತ್ತಾಯಿಸಿದ್ದಾರೆ. ಈ ಕುರಿತು ಈಗಾಗಲೇ ವರದಿ ನೀಡಿರುವುದಾಗಿ ಕ್ಯಾನ್ಸರ್ ತಜ್ಞ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ನಿರ್ಬಂಧ ವಿಧಿಸುವ ಪ್ರಸ್ತಾವನೆ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಕೂಡ ಪ್ರಸ್ತಾಪಿಸಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಮುಂದಿನ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia