Dailyhunt Logo
  • Light mode
    Follow system
    Dark mode
    • Play Story
    • App Story
BESCOM ಖಜಾನೆಗೆ ಭರ್ಜರಿ ಹಣ: 2025-26ರಲ್ಲಿ ₹293.62 ಕೋಟಿ ಲಾಭ

BESCOM ಖಜಾನೆಗೆ ಭರ್ಜರಿ ಹಣ: 2025-26ರಲ್ಲಿ ₹293.62 ಕೋಟಿ ಲಾಭ

ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು 2025-26ನೇ ಹಣಕಾಸು ವರ್ಷದಲ್ಲಿ ಬರೋಬ್ಬರಿ 293.62 ಕೋಟಿ ರೂ. ಲಾಭ ದಾಖಲಿಸಿದೆ.

ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ ಜಾರ್ಜ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಸ್ಕಾಂನ 144ನೇ ಆಡಳಿತ ಮಂಡಳಿ ಸಭೆಯಲ್ಲಿ 2025-26ನೇ ಸಾಲಿನ ಬೆಸ್ಕಾಂನ ಆರ್ಥಿಕ ಕಾರ್ಯಕ್ಷಮತೆ ಹಾಗೂ ಲಾಭ ದಾಖಲಿಸಲು ಕಾರಣವಾದ ಅಂಶಗಳನ್ನು ಮಂಡಿಸಲಾಯಿತು.

ಬೆಸ್ಕಾಂ ಲಾಭದ ಹಾದಿಯಲ್ಲಿ ಸಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಇಂಧನ ಸಚಿವರು, “ಹೆಚ್ಚಿದ ಆದಾಯ ವಸೂಲಿ, ವಿದ್ಯುತ್ ಖರೀದಿಯಲ್ಲಿ ಸಮರ್ಪಕ ನಿರ್ವಹಣೆ ಮತ್ತು ಹಣಕಾಸು ವೆಚ್ಚದಲ್ಲಿನ ಇಳಿಕೆ, ಆರ್ಥಿಕ ಶಿಸ್ತು ಹೆಚ್ಚಿಸಿರುವುದು ಮುಂತಾದ ಸಂಯೋಜಿತ ಪರಿಣಾಮವಾಗಿ 2025-26ನೇ ಸಾಲಿನಲ್ಲಿ ಬೆಸ್ಕಾಂ 293.62 ಕೋಟಿ ರೂ. ಲಾಭ ದಾಖಲಿಸಲು ಸಾಧ್ಯವಾಗಿದೆ," ಎಂದರು.

"ಅಲ್ಲದೆ, ಆದಾಯ ಹೆಚ್ಚಳ ಮತ್ತು ವೆಚ್ಚ ನಿಯಂತ್ರಣಕ್ಕೆ ಸಮಾನ ಆದ್ಯತೆ ನೀಡುವ ಮೂಲಕ ಬೆಸ್ಕಾಂನ ಆರ್ಥಿಕ ಕಾರ್ಯಕ್ಷಮತೆಯಲ್ಲಿ ಸುಧಾರಣೆ ತರಲಾಗಿದೆ,” ಎಂದು ಸಚಿವರು ಹೇಳಿದರು.

ಆದಾಯದ ಬೀಗ ಮತ್ತು ಬಿಲ್ ವಿಧಾನಗಳು

ಆದಾಯದ ಕುರಿತು ಮಾಹಿತಿ ಹಂಚಿಕೊಂಡ ಇಂಧನ ಸಚಿವರು, “ನಮ್ಮ ಸಮರ್ಪಕ ಬಿಲ್ಲಿಂಗ್ ವ್ಯವಸ್ಥೆಯು ಆರ್ಥಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರೋಬ್ ರೀಡಿಂಗ್ ವ್ಯವಸ್ಥೆಯಿಂದ ಸಿಬ್ಬಂದಿ ಹಸ್ತಕ್ಷೇಪ ಕಡಿಮೆಯಾಗಿದ್ದು, ಬಿಲ್ಲಿಂಗ್ ನಿಖರತೆ ಹೆಚ್ಚಿದೆ. ಇದರಿಂದ ಸುಮಾರು 100 ಮಿಲಿಯನ್ ಯೂನಿಟ್ ಹೆಚ್ಚುವರಿ ವಿದ್ಯುತ್ ಮಾರಾಟಕ್ಕೆ ಕಾರಣವಾಗಿರುವುದರ ಜತೆಗೆ ಗರಿಷ್ಠ ಬೇಡಿಕೆಯನ್ನು ನಿಖರವಾಗಿ ದಾಖಲಿಸಲು ಸಹ ನೆರವಾಗಿದೆ. ಹೆಚ್ಚಿನ ಆದಾಯ ನೀಡುವ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರ ವಿಭಾಗದಲ್ಲಿ ಶೇ.100ರಷ್ಟು ಬಿಲ್ಲಿಂಗ್ ದಕ್ಷತೆ ಸಾಧಿಸಲು ಬೆಸ್ಕಾಂ ಮುಂದಾಗಿದೆ,” ಎಂದರು.

“ಹೆಚ್ಚಿನ ಮೊತ್ತದ ಬಾಕಿ ಹಣಕ್ಕೆ ಸಂಬಂಧಿತ ಕಾನೂನು ಹೋರಾಟ ಮತ್ತು ನಿಯಂತ್ರಣ ಸಂಬಂಧಿತ ಪ್ರಕರಣಗಳ ನಿರಂತರ ಅನುಸರಣೆ ಮೂಲಕ ಕಂಪನಿಗೆ ಬರಬೇಕಿದ್ದ ಆದಾಯವನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ನಿಗದಿತ ಶುಲ್ಕ, ಕ್ರಾಸ್ ಸಬ್ಸಿಡಿ ಸರ್ಚಾರ್ಜ್ ಮತ್ತು ಹೆಚ್ಚುವರಿ ಸರ್ಚಾರ್ಜ್‌ಗಳ ಮೂಲಕ ಲಭ್ಯವಾಗುವ ಆದಾಯವೂ ಸೇರಿದೆ. ಸರಾಸರಿ ಆದಾಯ ವಸೂಲಿ (ಎಆರ್‌ಆರ್‌)ಯನ್ನು ನಿಯಮಿತವಾಗಿ ಪರಿಶೀಲಿಸುವ ಮೂಲಕ ಆದಾಯದ ಮೇಲ್ವಿಚಾರಣೆ, ಉತ್ತಮ ದರ ಪರಿಷ್ಕರಣೆ ಪ್ರಸ್ತಾವನೆಗಳು ಮತ್ತು ಪರಿಣಾಮಕಾರಿ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ,” ಎಂದು ತಿಳಿಸಿದರು.

ವೆಚ್ಚ ನಿರ್ವಹಣೆ ಮತ್ತು ನಷ್ಟ ನಿಯಂತ್ರಣ

ವೆಚ್ಚ ನಿರ್ವಹಣೆ ಹಾಗೂ ನಷ್ಟ ಆಗದಂತೆ ವಹಿಸಿದ ಎಚ್ಚರಿಕಾ ಕ್ರಮಗಳನ್ನು ವಿವರಿಸಿದ ಸಚಿವರು, “ವಿದ್ಯುತ್ ಖರೀದಿಯ ಸಮರ್ಪಕ ನಿರ್ವಹಣೆ, ಹಳೆಯ ಬಾಕಿಗಳನ್ನು ಕಂತುಗಳಲ್ಲಿ ಪಾವತಿಸುವ ಮೂಲಕ ವಿಳಂಬ ಪಾವತಿಯ ಹೆಚ್ಚುವರಿ ಶುಲ್ಕದ (ಎಲ್‌ಪಿಎಸ್‌) ಹೊರೆ ಕಡಿಮೆ ಮಾಡುವುದರ ಜತೆಗೆ, ಅರ್ಹ ಎಫ್.ಪಿ.ಪಿ.ಸಿ.ಎ. ಮೊತ್ತಗಳನ್ನು ಮತ್ತೆ ಪಡೆಯಲಾಗಿದೆ. ಅಲ್ಲದೇ, ವಿದ್ಯುತ್ ಉತ್ಪಾದನಾ ಸಂಸ್ಥೆಗಳು ನೀಡುವ ಮುಂಗಡ ಪಾವತಿ ರಿಯಾಯಿತಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ,” ಎಂದರು.

“ಹೆಚ್ಚಿನ ಬಡ್ಡಿದರದ ಸಾಲಗಳ ಪುನರ್‌ರಚನೆ ಮೂಲಕ ಹಣಕಾಸು ವೆಚ್ಚವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಬಡ್ಡಿ ವೆಚ್ಚ ಇಳಿಕೆಯಾಗುವುದರ ಜತೆಗೆ, ನಗದು ನಿರ್ವಹಣೆಯೂ ಸುಧಾರಿಸಿದೆ. ಸಾಲದ ಪಾವತಿಯಲ್ಲಿ ಬೆಸ್ಕಾಂ ಯಾವುದೇ ಡಿಫಾಲ್ಟ್ ಮಾಡಿಲ್ಲ,” ಎಂದು ಸಚಿವರು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Kannada Dunia