ಭೋಪಾಲ್: ಬಾರ್ಗಿ ಅಣೆಕಟ್ಟು ಬಳಿ ಪ್ರವಾಸಿಗರ ಬೋಟ್ ಮಗುಚಿ ಬಿದ್ದು ದುರಂತ ಸಂಭವಿಸಿದ್ದು, ಮೃತರ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದ ಜಬಲ್ಪುರದ ಬಾರ್ಗಿ ಡ್ಯಾಂ ಬಳಿ ಈ ದುರಂತ ಸಂಭವಿಸಿದೆ.
ಪ್ರವಾಸಿಗರನ್ನು ಬೋಟ್ ನಲ್ಲಿ ಕರೆದೊಯ್ಯುವಾಗ ಏಕಾಏಕಿ ಬಿರುಗಾಳಿ ಬೀಸಲಾರಂಭಿಸಿದ್ದು, ಬೋಟ್ ಮಗುಚಿ ಬಿದ್ದು ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಈವರೆಗೆ ಐವರು ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಪತ್ತೆ ಮಾಡಿದ್ದು, ನಾಲ್ವರ ಮೃತದೇಹಕ್ಕಾಗಿ ನದಿಯಲ್ಲಿ ಶೋಧಕಾರ್ಯ ಮುಂದುವರೆದಿದೆ.
ಬೋಟ್ ದುರಂತದಲ್ಲಿ ಈವರೆಗೆ 28 ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾರ್ಗಿ ಬಳಿ ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸ್ರುವ ಜಲಾಶಯದಲ್ಲಿ ಬೋಟ್ ಮಗುಚಿದ ಪರಿಣಾಮ ಈ ದುರಂತ ಸಂಭವಿಸಿದೆ. ಇನ್ನೂ ಆರು ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಮಧ್ಯಪ್ರದೇಶ ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಭಾವ್ ಸಿಂಗ್ ತಿಳಿಸಿದ್ದಾರೆ.
ಹೈಡ್ರಾಲಿಕ್ ಕ್ರೇನ್ ಮೂಲಕವಾಗಿ ಜಲಮೂಲದಿಂದ ಬೋಟ್ ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ವಿವರಿಸಿದ್ದಾರೆ.

