ಬೆಂಗಳೂರು: ದೇಶದಲ್ಲಿ ಈ ವರ್ಷ ತೀವ್ರ ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂಬ ಕೇಂದ್ರ ಸರ್ಕಾರದ ಮುನ್ಸೂಚನೆ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಸುರಿಯುವ ಮಳೆಯ ಪ್ರಮಾಣ ಹಾಗೂ ಲಭ್ಯವಿರುವ ನೀರಿನ ಆಧಾರದ ಮೇಲೆ ರೈತರು ಬಿತ್ತನೆ ಕಾರ್ಯ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಈ ವರ್ಷ ತೀವ್ರ ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೈತರಿಗೆ ಮಹತ್ವದ ಸಂದೇಶ ನೀಡಿದ್ದಾರೆ. ಜಲಾಶಯಗಳ ಒಳಹರಿವು ಕುಸಿದಿರುವ ಕಾರಣ, ಮುಂಬರುವ ದಿನಗಳಲ್ಲಿ ಸುರಿಯುವ ಮಳೆಯನ್ನು ಆಧರಿಸಿ ಬಿತ್ತನೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ. ಜೊತೆಗೆ, ಜಲಾಶಯಗಳು ಸಮರ್ಪಕವಾಗಿ ತುಂಬುವವರೆಗೆ ಹೆಚ್ಚು ನೀರು ಅಗತ್ಯವಿರುವ ಬೆಳೆಗಳನ್ನು ಬೆಳೆಯದಂತೆ ಸಲಹೆ ನೀಡಿದ್ದು, ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಸಿಎಂ, “ಈ ವರ್ಷ ತೀವ್ರ ಬರದ ಮುನ್ಸೂಚನೆ ಇದೆ. ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸಂಕಷ್ಟದ ಸಮಯದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಧೈರ್ಯವಾಗಿ ಮುಂದೆ ಸಾಗೋಣ” ಎಂದು ತಿಳಿಸಿದ್ದಾರೆ.
ಜಲಾಶಯಗಳಿಗೆ ಒಳಹರಿವು ಕುಸಿತ - ರೈತರಿಗೆ ಎಚ್ಚರಿಕೆ
ರಾಜ್ಯದ ಪ್ರಮುಖ ಜಲಾಶಯಗಳಾದ ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ ಹಾಗೂ ವಾಣಿವಿಲಾಸ ಸಾಗರಗಳಿಗೆ ಕಳೆದ ವರ್ಷದ ಹೋಲಿಕೆಯಲ್ಲಿ ಈ ಬಾರಿ ಒಳಹರಿವು ಶೂನ್ಯವಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಅಲ್ಲದೆ, ಕಾವೇರಿ ಜಲಾನಯನ ಪ್ರದೇಶದಲ್ಲಿಯೂ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.
“ಈ ಪರಿಸ್ಥಿತಿಯಲ್ಲಿ ರೈತರು ನೀರು ಬಿಡುಗಡೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರಬಾರದು. ಮುಂದಿನ ದಿನಗಳಲ್ಲಿ ಸುರಿಯುವ ಮಳೆಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಬಿತ್ತನೆ ಮಾಡಿ. ಉತ್ತಮ ಮಳೆಯಾದರೆ ಸರ್ಕಾರ ನೀರು ಒದಗಿಸುತ್ತದೆ. ಈಗಾಗಲೇ ಪ್ರತಿ ಸಚಿವರಿಗೆ 2-3 ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ನಾನು ಕೂಡ ರಾಜ್ಯದ ನಾಲ್ಕು ವಿಭಾಗಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತೇನೆ” ಎಂದು ಹೇಳಿದರು.
ಕುಡಿಯುವ ನೀರು, ವಿದ್ಯುತ್, ಮೇವು - ಇಲಾಖೆಗೆ ಸೂಚನೆ
ಬರ ಪರಿಸ್ಥಿತಿಯನ್ನು ಎದುರಿಸಲು ಸಂಬಂಧಿಸಿದ ಎಲ್ಲಾ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು.
“ವಿದ್ಯುತ್ ಪೂರೈಕೆ ಸುಗಮವಾಗಿರಲು ಇಂಧನ ಇಲಾಖೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವು ಲಭ್ಯತೆ ಕುರಿತು ಪರಿಶೀಲನೆ ನಡೆಸಲು ನಿರ್ದೇಶನ ನೀಡಲಾಗಿದೆ. ಅಗತ್ಯವಿರುವ ಕಡೆ ತುರ್ತಾಗಿ ಕೊಳವೆ ಬಾವಿಗಳನ್ನು ಕೊರೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಾನು ಕೂಡ ರಾಜ್ಯದ ನಾಲ್ಕು ವಿಭಾಗಗಳಿಗೆ ಭೇಟಿ ನೀಡಿ ನಂತರ ಜಿಲ್ಲಾಮಟ್ಟದಲ್ಲಿ ಪರಿಶೀಲನೆ ನಡೆಸುತ್ತೇನೆ” ಎಂದು ಹೇಳಿದರು.
ನೀರು ಹೆಚ್ಚು ಬೇಕಾಗುವ ಬೆಳೆಗಳನ್ನು ಬೆಳೆಸಬೇಡಿ
ಈ ನಡುವೆ ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಲಾಶಯಗಳ ನೀರಿನ ಮಟ್ಟ ಸುಧಾರಿಸುವವರೆಗೆ ಹೆಚ್ಚು ನೀರು ಅಗತ್ಯವಿರುವ ಬೆಳೆಗಳನ್ನು ಬೆಳೆಯದಂತೆ ರೈತರಿಗೆ ಮನವಿ ಮಾಡಿದರು.”ಇದು ಅತ್ಯಂತ ಗಂಭೀರ ಪರಿಸ್ಥಿತಿ. ಜಲಾಶಯಗಳ ನೀರಿನ ಮೇಲೆ ಮಾತ್ರ ಅವಲಂಬನೆ ಇಟ್ಟು ಬಿತ್ತನೆ ಮಾಡಬೇಡಿ. ನೀರು ಇಲ್ಲದಿದ್ದರೆ ನೀರಾವರಿಗಾಗಿ ನೀರು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮುಂಗಾರು ಮಳೆಯ ಪ್ರಗತಿ ಹಾಗೂ ಜಲಾಶಯಗಳ ನೀರಿನ ಮಟ್ಟವನ್ನು ಗಮನಿಸಿ ಕೃಷಿ ನಿರ್ಧಾರ ಕೈಗೊಳ್ಳಿ. ಜಲಾಶಯಗಳು ಸಮರ್ಪಕವಾಗಿ ತುಂಬುವವರೆಗೆ ಹೆಚ್ಚು ನೀರು ಬೇಕಾಗುವ ಬೆಳೆಗಳನ್ನು ಬೆಳೆಯುವ ನಿರ್ಧಾರ ಕೈಗೊಳ್ಳಬೇಡಿ” ಎಂದು ಮುಖ್ಯಮಂತ್ರಿ ರೈತರಿಗೆ ಮನವಿ ಮಾಡಿದರು.

