ಬೆಂಗಳೂರು: : ಆದಾಯಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಶೇಷ ಭೂಸ್ವಾಧೀನಾಧಿಕಾರಿ ಮಲ್ಲಿಕಾರ್ಜುನ ಬಿ. ಅವರಿಗೆ ಸೇರಿದ 11 ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಶೋಧದ ವೇಳೆ 100 ಎಕರೆ 5 ಗುಂಟೆ ಕೃಷಿ ಜಮೀನು ಸೇರಿದಂತೆ ₹18.33 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಲೋಕಾಯುಕ್ತ ದಾಳಿ ನಡೆಸುವ ಮುನ್ನವೇ ವಿಶೇಷ ಭೂಸ್ವಾಧೀನ ಅಧಿಕಾರಿ ಹುದ್ದೆಗೆ ಮಲ್ಲಿಕಾರ್ಜುನ್ ರಾಜೀನಾಮೆ ನೀಡಿದ್ದಾರೆಯೇ ಎಂಬ ಚರ್ಚೆ ಇದೀಗ ತೀವ್ರವಾಗಿದೆ. ಬೆಂಗಳೂರಿನ ವಿಶೇಷ ಭೂಸ್ವಾಧೀನ ಅಧಿಕಾರಿ ಮಲ್ಲಿಕಾರ್ಜುನ್ ಅವರಿಗೆ ಸಂಬಂಧಿಸಿದ 11 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದು, ಕೃಷಿ ಜಮೀನು ಸೇರಿದಂತೆ ₹18.33 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಲೋಕಾಯುಕ್ತ ಅಧಿಕಾರಿಗಳ ಶೋಧದ ವೇಳೆ 2 ವಾಸದ ಮನೆಗಳು, 100 ಎಕರೆ 5 ಗುಂಟೆ ಕೃಷಿ ಜಮೀನು ಸೇರಿದಂತೆ ಹಲವು ಸ್ಥಿರಾಸ್ತಿಗಳ ಮಾಹಿತಿ ಪತ್ತೆಯಾಗಿದೆ.
ಇನ್ನು ಶೋಧದ ವೇಳೆ ₹2.53 ಕೋಟಿ ನಗದು ಪತ್ತೆಯಾಗಿದ್ದು, ಸುಮಾರು ₹3.10 ಲಕ್ಷ ಮೌಲ್ಯದ ಚಿನ್ನಾಭರಣ ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದರ ಜೊತೆಗೆ ವಾಹನಗಳು, ಬ್ಯಾಂಕ್ ಠೇವಣಿ ಹಾಗೂ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ಚರಾಸ್ತಿಗಳೂ ಪತ್ತೆಯಾಗಿವೆ.
ರಾಜೀನಾಮೆಗೂ ದಾಳಿಗೂ ಲಿಂಕ್ ಇದೆಯೇ?
ಮಲ್ಲಿಕಾರ್ಜುನ್ ಅವರು ಕಳೆದ ಜುಲೈ 22ರಂದೇ ವಿಶೇಷ ಭೂಸ್ವಾಧೀನ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದರು ಎನ್ನಲಾಗಿದೆ. ಲೋಕಾಯುಕ್ತ ದಾಳಿ ನಡೆಯುವ ಬಗ್ಗೆ ಮುಂಚಿತವಾಗಿ ಮಾಹಿತಿ ಇದ್ದ ಕಾರಣಕ್ಕೆ ರಾಜೀನಾಮೆ ನೀಡಲಾಗಿತ್ತೇ ಎಂಬ ಪ್ರಶ್ನೆಯೂ ಇದೀಗ ಎದುರಾಗಿದೆ.ಆಗಸ್ಟ್ ತಿಂಗಳಿನಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದರೆ, ಜುಲೈ ನಲ್ಲಿ ಅವರು ರಾಜೀನಾಮೆ ನೀಡಿದ್ದರು . ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಅವರು ರಾಜೀನಾಮೆ ನೀಡಿದ್ದರು.
ಆದರೆ, ರಾಜೀನಾಮೆ ಮತ್ತು ಲೋಕಾಯುಕ್ತ ಶೋಧದ ನಡುವೆ ನೇರ ಸಂಬಂಧವಿದೆ ಎಂಬುದು ಸದ್ಯಕ್ಕೆ ದೃಢಪಟ್ಟಿಲ್ಲ. ಈ ಕುರಿತು ತನಿಖೆಯಿಂದಲೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
ಒಟ್ಟಿನಲ್ಲಿ, ಮಲ್ಲಿಕಾರ್ಜುನ್ ಅವರಿಗೆ ಸಂಬಂಧಿಸಿದ 11 ಸ್ಥಳಗಳಲ್ಲಿನ ಲೋಕಾಯುಕ್ತ ಶೋಧ ಇದೀಗ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಕ್ರಮ ಅಥವಾ ಆದಾಯಕ್ಕೆ ಮೀರಿದ ಆಸ್ತಿ ಹೊಂದಿರುವ ಆರೋಪಗಳ ಕುರಿತು ಲೋಕಾಯುಕ್ತ ತನಿಖೆ ಮುಂದುವರಿದಿದೆ.

