ನವದೆಹಲಿ: ಪತಿ ರಾಜಾ ರಘುವಂಶಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸೋನಂ ರಘುವಂಶಿ ಅವರಿಗೆ ನೀಡಲಾಗಿದ್ದ ಜಾಮೀನನ್ನು ತಾತ್ಕಾಲಿಕವಾಗಿ ತಡೆಯಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಆದರೆ, ಜಾಮೀನು ಆದೇಶವನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ನ್ಯಾಯಾಲಯ, ಮುಂದಿನ ವಾರ ಪ್ರಕರಣವನ್ನು ಆಲಿಸುವುದಾಗಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಶೀಲ್ ನಾಗು ಅವರಿದ್ದ ಪೀಠ, ಪ್ರಥಮ ದೃಷ್ಟಿಗೆ ಮೇಘಾಲಯ ಹೈಕೋರ್ಟ್ ಜಾಮೀನು ನೀಡಿದ ವಿಧಾನ ಕುರಿತು ಕೆಲವು ಅನುಮಾನಗಳಿವೆ ಎಂದು ಹೇಳಿತು. ಆದರೆ, ಸೋನಂ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದರಿಂದ ಈ ಹಂತದಲ್ಲಿ ಜಾಮೀನು ಸ್ಥಗಿತಗೊಳಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿತು.
ವಿಚಾರಣೆ ವೇಳೆ ನ್ಯಾಯಪೀಠ, "ಅಪರಾಧ ಎಷ್ಟೇ ಭೀಕರವಾಗಿದ್ದರೂ ಜಾಮೀನು ನಿಯಮ, ಜೈಲು ಅಪವಾದ. ಒಮ್ಮೆ ಆರೋಪಿಗೆ ಜಾಮೀನು ದೊರೆತು ಬಿಡುಗಡೆಗೊಂಡ ಬಳಿಕ ಅದನ್ನು ರದ್ದುಗೊಳಿಸುವಾಗ ನ್ಯಾಯಾಲಯ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು" ಎಂದು ಮೌಖಿಕವಾಗಿ ತಿಳಿಸಿತು.
ಇದೇ ವೇಳೆ, ಮೇಘಾಲಯ ಸರ್ಕಾರದ ಅರ್ಜಿಗೆ ಸಂಬಂಧಿಸಿದಂತೆ ಸೋನಂ ಪರ ವಕೀಲರು ಪ್ರತಿಕ್ರಿಯಾ ಪ್ರಮಾಣಪತ್ರ (ಕೌಂಟರ್ ಅಫಿಡವಿಟ್) ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯ, ಮುಂದಿನ ಗುರುವಾರ ವಿಚಾರಣೆ ನಡೆಸುವುದಾಗಿ ಹೇಳಿದೆ.
ಮೇಘಾಲಯ ಸರ್ಕಾರದ ವಾದ
ಮೇಘಾಲಯ ಸರ್ಕಾರವು ಹೈಕೋರ್ಟ್ ಜಾಮೀನು ಆದೇಶವನ್ನು ಪ್ರಶ್ನಿಸಿ ಗುರುವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತುರ್ತು ವಿಚಾರಣೆಗೆ ಮನವಿ ಮಾಡಿದರು.ಸೋನಂಗೆ ಈ ಹಿಂದೆ ಮೂರು ಬಾರಿ ಜಾಮೀನು ನಿರಾಕರಿಸಲಾಗಿತ್ತು. ಪರಾರಿಯಾಗುವ ಸಾಧ್ಯತೆ ಇರುವ ಕಾರಣದಿಂದಲೇ ಆ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ, ಬಂಧನದ ವೇಳೆ ಬಂಧನದ ಕಾರಣಗಳನ್ನು ಸಂಪೂರ್ಣವಾಗಿ ತಿಳಿಸಿಲ್ಲ ಎಂಬ ಕಾರಣವನ್ನು ಉಲ್ಲೇಖಿಸಿ ಹೈಕೋರ್ಟ್, ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನು ಆದೇಶವನ್ನು ಎತ್ತಿಹಿಡಿದಿತ್ತು. ಈ ಕೊರತೆ ಕೇವಲ ಕಾನೂನಿನ ಒಂದು ವಿಧಿಯನ್ನು ಉಲ್ಲೇಖಿಸುವಾಗ ಸಂಭವಿಸಿದ ಟೈಪಿಂಗ್ ದೋಷಕ್ಕೆ ಸಂಬಂಧಿಸಿದ್ದು, ಅದನ್ನು ಆಧಾರವಾಗಿಸಿಕೊಂಡು ಜಾಮೀನು ನೀಡಲಾಗಿದೆ ಎಂದು ಮೆಹ್ತಾ ವಾದಿಸಿದರು.ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸೋನಂ ಪರಾರಿಯಾಗುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತಪಡಿಸಿದ ಅವರು, ಜಾಮೀನು ಆದೇಶಕ್ಕೆ ತಡೆ ನೀಡುವಂತೆ ಅಥವಾ ಕಠಿಣ ಷರತ್ತುಗಳನ್ನು ವಿಧಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು.
ಪ್ರಕರಣದ ಹಿನ್ನೆಲೆ
ಮಧ್ಯಪ್ರದೇಶದ ಇಂದೋರ್ ಮೂಲದ ನವವಿವಾಹಿತ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಂ ರಘುವಂಶಿ ಮಧುಚಂದ್ರಕ್ಕಾಗಿ ಮೇಘಾಲಯಕ್ಕೆ ತೆರಳಿದ್ದರು. ಈ ವೇಳೆ ಇಬ್ಬರೂ ನಾಪತ್ತೆಯಾಗಿದ್ದರು. ನಂತರ ಜೂನ್ 2ರಂದು ಸೋಹ್ರಾ ಸಮೀಪದ ಕಂದಕವೊಂದರಲ್ಲಿ ರಾಜಾ ಅವರ ಮೃತದೇಹ ಪತ್ತೆಯಾಗಿತ್ತು. ತನಿಖೆ ನಡೆಸಿದ ಮೇಘಾಲಯ ಪೊಲೀಸ್ ವಿಶೇಷ ತನಿಖಾ ತಂಡ (SIT), ಸೋನಂ ರಘುವಂಶಿ, ರಾಜ್ ಕುಶ್ವಾಹಾ, ವಿಶಾಲ್ ಸಿಂಗ್ ಚೌಹಾಣ್, ಆಶಿಷ್ ಸಿಂಗ್ ರಾಜಪೂತ್ ಹಾಗೂ ಆನಂದ್ ಕುರ್ಮಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ವಿಧಿಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದೆ.

